ಸಿನಿವಾಣಿ

ಮಿನರ್ವ ಮಿಲ್​ನಲ್ಲಿ ಕಬ್ಜ ಬಿಡಾರ!; ನಲವತ್ತು ಸೆಟ್​​ಗಳಲ್ಲಿ ಸತತ 60 ದಿನ ಶೂಟಿಂಗ್

ಬೆಂಗಳೂರು: ‘ರಿಯಲ್ ಸ್ಟಾರ್’ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಶೂಟಿಂಗ್ ಹಂತದಲ್ಲಿಯೇ ಸೆಟ್ ವಿಚಾರವಾಗಿ ಸಾಕಷ್ಟು ಸದ್ದು ಮಾಡುತ್ತಿರುವ ಬಹುಕೋಟಿ ವೆಚ್ಚದ ಚಿತ್ರ. ಇದೇ ‘ಕಬ್ಜ’ ಬಳಗಕ್ಕೆ ಇತ್ತೀಚೆಗಷ್ಟೇ ‘ಕಿಚ್ಚ’ ಸುದೀಪ್ ಸಹ ಎಂಟ್ರಿಕೊಟ್ಟಿದ್ದರು. ಈಗ ಇಂದಿನಿಂದ (ಮಾ. 3) ಚಿತ್ರದ ಶೂಟಿಂಗ್ ಸಹ ಶುರುವಾಗಿದೆ.

ಕನ್ನಡ ಸೇರಿ ಏಳೆಂಟು ಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ಕಬ್ಜ’ ಗ್ಯಾಂಗ್​ಸ್ಟರ್ ಹಿನ್ನೆಲೆಯುಳ್ಳ ಚಿತ್ರ. 80ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುವುದರಿಂದ ಆಗಿನ ಕಾಲಮಾನವನ್ನೇ ತೆರೆಮೇಲೆ ತರಬೇಕಿತ್ತು. ಹಾಗಾಗಿ ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಬರೋಬ್ಬರಿ 40 ಸೆಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 15 ಸೆಟ್ ನಿರ್ವಣವಾಗಿದ್ದು, ಹೈದರಾಬಾದ್ ಮತ್ತು ಚೆನ್ನೈನಿಂದ 200ಕ್ಕೂ ಹೆಚ್ಚು ಮಂದಿ ಆಗಮಿಸಿ ಸೆಟ್ ಕೆಲಸದಲ್ಲಿ ನಿರತರಾಗಿದ್ದಾರೆ.

ಸತತವಾಗಿ 60 ದಿನ ಶೂಟಿಂಗ್: ಮಾರ್ಚ್ 3ರಿಂದ ಶುರುವಾಗುವ ಚಿತ್ರೀಕರಣ ಏಪ್ರಿಲ್ ಮುಗಿಯುವ ವರೆಗೂ ನಡೆಯಲಿದೆ. ಈ ಬಗ್ಗೆ ವಿಜಯವಾಣಿಗೆ ಹೆಚ್ಚಿನ ಮಾಹಿತಿ ನೀಡುವ ನಿರ್ದೇಶಕ ಆರ್. ಚಂದ್ರು, ‘ಮಿನರ್ವ ಮಿಲ್​ಅನ್ನೇ ಮೂರು ತಿಂಗಳು ಲೀಸ್​ಗೆ ಪಡೆದಿದ್ದೇವೆ. ಅದ್ದೂರಿ ವೆಚ್ಚದಲ್ಲಿ 40 ಸೆಟ್​ಗಳ ಪೈಕಿ 15 ಸೆಟ್​ಗಳು ಈಗಾಗಲೇ ತಲೆಎತ್ತಿವೆ. ಸತತ 60 ದಿನ ಶೂಟಿಂಗ್ ನಡೆಯುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಲಾವಿದರೂ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ 60 ದಿನದ ಚಿತ್ರೀಕರಣ ಮುಗಿದರೆ, ಶೇ. 75ರಷ್ಟು ಕೆಲಸ ಮುಗಿದಂತೆ. ಆ ಬಳಿಕ ಜಾರ್ಖಂಡ್, ಮುಂಬೈ, ಪಾಂಡಿಚೇರಿಯಲ್ಲಿಯೂ ಶೂಟಿಂಗ್ ನಡೆಯಲಿದೆ’ ಎಂದು ಮಾಹಿತಿ ನೀಡುತ್ತಾರೆ.

ಏಪ್ರಿಲ್ ಕೊನೆಗೆ ಸುದೀಪ್ ಎಂಟ್ರಿ: ‘ಕಬ್ಜ’ ಚಿತ್ರದಲ್ಲಿನ ಕಿಚ್ಚ ಸುದೀಪ್ ಅವರ ಭಾರ್ಗವ್ ಭಕ್ಷಿ ಪಾತ್ರದ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಈ ಬಳಗವನ್ನು ಯಾವಾಗ ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಆ ಬಗ್ಗೆಯೂ ನಿರ್ದೇಶಕರು ಹೇಳಿಕೊಂಡಿದ್ದಾರೆ. ‘ಈಗಾಗಲೇ ‘ವಿಕ್ರಾಂತ್ ರೋಣ’ ಚಿತ್ರದ ಕೆಲಸಗಳಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಏಪ್ರಿಲ್ ಮಧ್ಯದ ವೇಳೆಗೆ ‘ಕಬ್ಜ’ ಸೆಟ್​ಗೆ ಆಗಮಿಸಲಿದ್ದಾರೆ. ಅವರ ಜತೆಗೆ ನಾಯಕಿಯೂ ಚಿತ್ರದ ಭಾಗವಾಗಲಿದ್ದಾರೆ. ಶೀಘ್ರದಲ್ಲಿಯೇ ಆ ವಿಚಾರವನ್ನು ಹೊರಗೆಡವಲಿದ್ದೇವೆ’ ಎಂಬುದು ಆರ್. ಚಂದ್ರು ಮಾತು.