ಸಿನಿವಾಣಿ

ಕಾಡಾ ಚಿತ್ರದಲ್ಲಿ ಜೆಕೆ-ಕಾವ್ಯಾ; ಸೀಕ್ವೆಲ್ ಆಗಲಿದೆ ಸೈಕೋ ಥ್ರಿಲ್ಲರ್ ಶೈಲಿಯ ಕಥೆ

ಬೆಂಗಳೂರು: ‘ಐರಾವನ್’ ಚಿತ್ರವನ್ನು ಮುಗಿಸಿ ಅದರ ಬಿಡುಗಡೆಗೆ ಕಾದಿರುವ ಕಾರ್ತಿಕ್ ಜಯರಾಮ್ (ಜೆಕೆ), ಇದೀಗ ‘ಕಾಡಾ’ ಎಂಬ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಈ ಹಿಂದೆ ‘ಮಂಜರಿ’ ಮತ್ತು ‘ರಿಂಗ್ ಮಾಸ್ಟರ್’ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಶ್ರುತ್ ನಾಯ್್ಕ ಈ ಚಿತ್ರದ ನಿರ್ದೇಶಕರು. ‘ಕಾಡಾ’ ಎಂಬುದಿಲ್ಲಿ ಚಿತ್ರದ ಕಥಾನಾಯಕನ ಹೆಸರು. ಸೈಕೋ ಕಿಲ್ಲರ್ ಶೈಲಿಯ ಪಾತ್ರದಲ್ಲಿ ಜೆಕೆ ಕಾಣಿಸಿಕೊಳ್ಳಲಿದ್ದು, ಅವರಿಗೆ ನಾಯಕಿಯಾಗಿ ಕಾವ್ಯಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾ ಕರಿಯರ್​ನಲ್ಲಿಯೇ ವಿಭಿನ್ನವಾದ ಪಾತ್ರವೊಂದನ್ನು ‘ಕಾಡಾ’ದಲ್ಲಿ ಮಾಡುತ್ತಿರುವುದಾಗಿ ಕಾವ್ಯಾ ಹೇಳಿಕೊಂಡಿದ್ದಾರೆ.

‘ಇಲ್ಲಿಯವರೆಗೂ ನಾನು ಮಾಡಿದ ಪಾತ್ರಗಳಿಗೂ ಈ ಪಾತ್ರಕ್ಕೂ ತುಂಬ ವ್ಯತ್ಯಾಸವಿದೆ. ಡಾರ್ಕ್ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಒಂದೂವರೆ ಗಂಟೆ ಅವಧಿಯ ಚಿತ್ರವಿದು. ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸುವ ಪ್ಲಾನ್ ಇದೆ. ಬೆಂಗಳೂರು, ಬೇಲೂರು ಸೇರಿ ಹಲವೆಡೆ 20ಕ್ಕೂ ಅಧಿಕ ದಿನಗಳಲ್ಲಿ ಶೂಟಿಂಗ್ ಮುಗಿಸಲಿದ್ದೇವೆ. ಇದಾದ ಬಳಿಕ ಇದರ ಸೀಕ್ವೆಲ್ ಸಹ ಮೂಡಿಬರಲಿದೆ’ ಎಂಬುದು ಕಾವ್ಯಾ ಮಾತು.

ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ‘ಉಗ್ರಂ’ ಮಂಜು ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ಮುಂಬೈ ಮೂಲದ ಸ್ಲೆಂಡೀಡ್ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅರುಣ್ ಸುರೇಶ್ ಛಾಯಾಗ್ರಹಣ, ನಂದು ಮ್ಯೂಸಿಕ್ ಈ ಚಿತ್ರಕ್ಕಿದೆ. ಈ ಸಿನಿಮಾ ಹೊರತುಪಡಿಸಿದರೆ, ಮಲಯಾಳಂನಲ್ಲಿ ಸಿದ್ಧವಾಗುತ್ತಿರುವ ಮೋಹನಲಾಲ್ ಮತ್ತು ಪೃಥ್ವಿರಾಜ್ ಜತೆಗಿನ ‘ಬ್ರೋ ಡ್ಯಾಡಿ’ ಸಿನಿಮಾ ಕೆಲಸದಲ್ಲಿಯೂ ಕಾವ್ಯಾ ಬಿಜಿಯಾಗಿದ್ದಾರೆ. ಕನ್ನಡದಲ್ಲಿ ‘ಲಂಕೆ’ ಬಿಡುಗಡೆಗೆ ಸಿದ್ಧವಿದೆ.