ಸಿನಿವಾಣಿ

19ಕ್ಕೆ ತೆರೆಗೆ ಬರಲಿದೆ ಕಿರಣ್​ ರಾಜ್​ರ ಜೀವ್ನಾನೇ ನಾಟ್ಕ...

ಬೆಂಗಳೂರು: ಕಿರುತೆರೆಯಲ್ಲಿ ಗುರುತಿಸಿಕೊಂಡ ಅದೆಷ್ಟೋ ಕಲಾವಿದರು ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ಧಾರಾವಾಹಿ ಜತೆಗೆ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿ ಕೊಳ್ಳುತ್ತಿದ್ದಾರೆ. ಇದೀಗ ಆ ಪಟ್ಟಿಗೆ ‘ಕನ್ನಡತಿ’ ಸೀರಿಯಲ್​ನ ನಾಯಕ ಕಿರಣ್ ರಾಜ್ ಸಹ ಸೇರ್ಪಡೆಯಾಗಿದ್ದಾರೆ. ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರದ ಮೂಲಕ ಮತ್ತೊಂದು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೇನು ಇದೇ ತಿಂಗಳು 19ಕ್ಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ಕನ್ನಡತಿ’ ಧಾರಾವಾಹಿ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಕಿರಣ್, ಈಗಾಗಲೇ ‘ಬಹದ್ದೂರ್ ಗಂಡು’ ಸಿನಿಮಾದಲ್ಲಿ ನಟಿಸಿದ್ದಾರೆ.

ಈಗ ಮಹಾಭಾರತದ ಉಪಕಥೆ ಆಧರಿಸಿ ನಿರ್ವಣವಾಗಿರುವ ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರದಲ್ಲಿಯೂ ನಟಿಸಿದ್ದಾರೆ. ರಾಜು ಭಂಡಾರಿ ರಾಜವರ್ತ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಸರಿಗಮಪ ಖ್ಯಾತಿಯ ಗಾಯಕ ಶ್ರೀಹರ್ಷ ಈ ಚಿತ್ರದ ಮೂಲಕ ನಟನೆಗೂ ಸೈ ಎಂದಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಪವಿತ್ರ ಕೋಟ್ಯಾನ್ ಮತ್ತು ಅನಿಕ ರಮ್ಯ ಈ ಚಿತ್ರದ ನಾಯಕಿಯರು. ರಾಜಶೇಖರ್ ಶಿರಹಟ್ಟಿ ಈ ಚಿತ್ರದ ನಿರ್ಮಾಪಕರು.