ಹೈದರಾಬಾದ್: ದಕ್ಷಿಣ ಮತ್ತು ಬಾಲಿವುಡ್ ನಡುವೆ ಯಾರು ಬೆಸ್ಟು ಎಂಬ ಚರ್ಚೆ ಕೆಲವು ದಿನಗಳಿಂದ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ದಕ್ಷಿಣದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಆಹಾ ಓಟಿಗಾಗಿ ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ 'ಅನ್ಸ್ಟಾಪಬಲ್' ಎಂಬ ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಜಯಸುಧಾ ಮತ್ತು ಜಯಪ್ರದಾ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ಆಗುತ್ತಿರು ತಾರತಮ್ಯಗಳ ಕುರಿತು ಮಾತನಾಡುವುದರ ಜತೆಗೆ, ದಕ್ಷಿಣದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ಹೊರಹಾಕಿದ್ದಾರೆ.
'ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ನನಗೆ ಆ ಬಗ್ಗೆ ಬೇಸರವಿಲ್ಲ. ಅವರೊಬ್ಬ ಅದ್ಭುತ ನಟಿ. ಆದರೆ, ಅವರು 10 ಸಿನಿಮಾ ಮುಗಿಸೋಕಿಂತ ಮುನ್ನ ಅವರಿಗೆ ಅಂಥದ್ದೊಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿತು. ನಾನು ನೂರಾರು ಚಿತ್ರಗಳಲ್ಲಿ ನಟಿಸಿದ್ದೇವೆ. ಆದರೆ, ಯಾವ ಸರ್ಕಾರವೂ ಗುರುತಿಸಿಲ್ಲ' ಎಂದಿದ್ದಾರೆ.
ಇದನ್ನೂ ಓದಿ: 9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …
ಈ ಬಗ್ಗೆ ಮತ್ತಷ್ಟು ಮಾತನಾಡಿರುವ ಅವರು, 'ನಾವು ಬಿಡಿ. ಗಿನ್ನೀಸ್ ದಾಖಲೆಗೆ ಭಾಜನರಾದ ನಟಿ-ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಅಂಥದ್ದೊಂದು ಪ್ರಶಸ್ತಿ ಸಿಗಲಿಲ್ಲ. ಕೆಲವೊಮ್ಮೆ, ದಕ್ಷಿಣದವರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆಯಾ ಎಂದನಿಸುತ್ತದೆ. ಇಂಥದ್ದನ್ನೆಲ್ಲ ನಾವು ಕೇಳಿ ಪಡೆಯಬಾರದು. ನಮಗೆ ಗೌರವಯುತವಾಗಿ ಸಿಗಬೇಕು' ಎಂದು ಹೇಳಿದ್ದಾರೆ.