ಸಿನಿವಾಣಿ

ಪ್ರಶಸ್ತಿ ವಿಷಯದಲ್ಲೂ ದಾಖಲೆ ಮಾಡಿದ್ದಾರೆ ಜಯಂತಿ ...

ಬೆಂಗಳೂರು: ಜಯಂತಿ ಅವರು ತಮ್ಮ ವೃತ್ತಿಜೀವನದಲ್ಲಿ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಈ ಪೈಕಿ ರಾಜ್ಯ ಸರ್ಕಾರದಿಂದ ಆರು ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ, ಕನ್ನಡದ ನಟಿಯರಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಜಯಂತಿ ಅವರು ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ನಟನೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಅವರಿಗೆ ಸಿಕ್ಕಿದೆ. ಇನ್ನು ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಯಂತಿ ಅವರಿಗೆ ಸಿಕ್ಕ ಮೊದಲ ಪ್ರಶಸ್ತಿ ಎಂದರೆ ಅದು, ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೆ. ನಂತರದ ವರ್ಷಗಳಲ್ಲಿ ಅವರಿಗೆ ‘ಮನಸ್ಸಿನಂತೆ ಮಾಂಗಲ್ಯ’, ‘ಧರ್ಮ ದಾರಿ ತಪ್ಪಿತು’ ಮತ್ತು ‘ಮಸಣದ ಹೂವು ಚಿತ್ರಗಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ಪೈಕಿ ಎರಡು ಚಿತ್ರಗಳು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳು ಎಂಬುದು ಗಮನಾರ್ಹ. ಇದಲ್ಲದೆ ‘ಆನಂದ್’ ಮತ್ತು ‘ಟುವ್ವಿ ಟುವ್ವಿ ಟುವ್ವಿ’ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಎರಡು ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಹ ಅವರಿಗೆ ಸಿಕ್ಕಿತ್ತು.

ಇನ್ನು ಚಿತ್ರರಂಗಕ್ಕೆ ಅವರು ನೀಡಿರುವ ಗಮನಾರ್ಹ ಕೊಡುಗೆಯನ್ನು ಗಮನಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಡಾ. ರಾಜಕುಮಾರ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು.