ಬೆಂಗಳೂರು: ಸೋಮವಾರ ಬೆಳಿಗ್ಗೆ ನಿಧನರಾದ ಹಿರಿಯ ನಟಿ ಜಯಂತಿ ಅವರ ಅಂತ್ಯಕ್ರಿಯೆ ಸಂಜೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.
ಇದಕ್ಕೂ ಮುನ್ನ ಜಯಂತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರಾದ ದೊಡ್ಡಣ್ಣ, ಜಯಮಾಲಾ, ತಾರಾ, ಸುಧಾರಾಣಿ, ಶ್ರುತಿ, ಉಮೇಶ್, ಜಗ್ಗೇಶ್, ಪುನೀತ್ ರಾಜಕುಮಾರ್, ಸೃಜನ್ ಲೋಕೇಶ್, ಭಾವನಾ, ಚಿನ್ನೇಗೌಡ, ಸಾರಾ ಗೋವಿಂದು, ಪದ್ಮಾ ವಾಸಂತಿ, ರವಿಶಂಕರ್ ಗೌಡ, ಅನು ಪ್ರಭಾಕರ್ ಸೇರಿ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ನೂರಾರು ಅಭಿಮಾನಿಗಳು ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು.
ಆ ನಂತರ ಜಯಂತಿ ಅವರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾ.ರಾಜ್ಕುಮಾರ್ ಐ ಬ್ಯಾಂಕ್ಗೆ ದಾನ ಮಾಡಲಾಗಿದ್ದು, ಆ ಕುರಿತ ಪ್ರಕ್ರಿಯೆ ರುದ್ರಭೂಮಿಯಲ್ಲೇ ಮುಗಿದಿದೆ. ಹುಟ್ಟಿದಾಗಿನಿಂದಲೇ ಅಂಧತ್ವಕ್ಕೆ ಒಳಗಾಗಿರುವ ಮಗುವೊಂದಕ್ಕೆ ಜಯಂತಿ ಅವರ ಕಣ್ಣುಗಳನ್ನು ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.