ಸಿನಿವಾಣಿ

ಆಸ್ಕರ್​ ಸ್ಪರ್ಧೆಯಿಂದ 'ಜಲ್ಲಿಕಟ್ಟು' ಔಟ್​; 'ಬಿಟ್ಟು'ಗೆ ಇನ್ನೂ ಇದೆ ಅವಕಾಶ

ಮುಂಬೈ: ಲಿಜೋ ಜೋಸ್​ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ 'ಜಲ್ಲಿಕಟ್ಟು' 93ನೇ ಆಸ್ಕರ್​ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನವಾಗಿದ್ದು ಗೊತ್ತೇ ಇದೆ. ಈಗ ಆ ಚಿತ್ರ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಸ್ಪರ್ಧೆಯಿಂದ ಔಟ್​ ಆಗಿದೆ. ಇನ್ನು ಕರೀಷ್ಮಾ ದೇವ್​ ದೂಬೆ ನಿರ್ದೇಶನದ 'ಬಿಟ್ಟು' ಚಿತ್ರವು ಉತ್ತಮ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಮುಂದಿನ ಸುತ್ತಿನ ಸ್ಪರ್ಧೆಗೆ ಪ್ರವೇಶ ಪಡೆದಿದೆ.

ಈ ಬಾರಿ, ಭಾರತದಿಂದ 27 ಚಿತ್ರಗಳು ಪೈಪೋಟಿ ನಡೆಸಿದ್ದು, ಈ ಪೈಕಿ 'ಜಲ್ಲಿಕಟ್ಟು' ಚಿತ್ರಕ್ಕೆ ಭಾರತವನ್ನು ಪ್ರತಿನಿಧಿಸುವ ಅಪರೂಪದ ಅವಕಾಶ ಸಿಕ್ಕಿತ್ತು. ಈ ಬಾರಿ ಕಣದಲ್ಲಿದ್ದ 27 ಚಿತ್ರಗಳ ಪೈಕಿ ಹಿಂದಿ ಚಿತ್ರಗಳೇ ಹೆಚ್ಚಿದ್ದವು. ಇನ್ನು ಮರಾಠಿ, ಮಲಯಾಳಂ ಚಿತ್ರರಂಗದಿಂದಲೂ ಕೆಲವು ಚಿತ್ರಗಳು ಪೈಪೋಟಿ ನಡೆಸಿದ್ದವು. ಈ ಪೈಕಿ ತೀರ್ಪುಗಾರರ ಮೆಚ್ಚಿನ ಚಿತ್ರವಾಗಿ 'ಜಲ್ಲಿಕಟ್ಟು' ಹೊರಹೊಮ್ಮಿದ್ದು, ಮನುಷ್ಯರು ಪ್ರಾಣಿಗಳಿಗಿಂಥ ಕೆಟ್ಟವರು ಎಂದು ಸಾರುವ ಅಪರೂಪದ ಚಿತ್ರ ನಮ್ಮೆಲ್ಲರ ಆಯ್ಕೆಯಾಗಿದೆ ಎಂದು ತೀರ್ಪುಗಾರ ಮಂಡಳಿಯ ಅಧ್ಯಕ್ಷ ರಾಹುಲ್​ ರವೈಲ್​ ಹೇಳಿಕೊಂಡಿದ್ದರು.

ಈ ಬಾರಿ ಕಣದಲ್ಲಿ ಹಿಂದಿಯಿಂದ 'ಚಪಾಕ್', 'ಶಕುಂತಲಾ ದೇವಿ', 'ಚಲಾಂಗ್​', 'ಗುಲಾಬೋ ಸಿತಾಬೋ', 'ದಿ ಸ್ಕೈ ಈಸ್​ ಪಿಂಕ್​', 'ಬುಲ್​ಬುಲ್​' ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅವೆಲ್ಲವನ್ನು ಹಿಂದಿಕ್ಕಿ, 'ಜಲ್ಲಿಕಟ್ಟು' ಆಯ್ಕೆಯಾಗಿತ್ತು. ನಟಿ ಕಂಗನಾ ರಣಾವತ್​ ಸಹ ಈ ಚಿತ್ರವನ್ನು ಪ್ರೋತ್ಸಾಹಿಸುವ ಭರದಲ್ಲಿ ಬಾಲಿವುಡ್​ ಚಿತ್ರಗಳು ಮತ್ತು ಅಲ್ಲಿನ ಜನರ ಕಾಲೆಳೆದಿದ್ದರು. ಈ ಕುರಿತು ಟ್ವೀಟ್​ ಮಾಡಿದ್ದ ಅವರು, 'ಬುಲ್ಲಿವುಡ್​ನ ಗ್ಯಾಂಗ್​ಗಳಿಗೆ ಜನ ಮಂಗಳಾರತಿ ಎತ್ತಿದ್ದು ಕೊನೆಗೂ ಒಂದಿಷ್ಟು ಫಲ ಕೊಡುತ್ತಿದೆ. ಭಾರತೀಯ ಸಿನಿಮಾಗಳೆಂದರೆ ಕೇವಲ ನಾಲ್ಕು ಕುಟುಂಬಗಳಿಗೆ ಸಂಬಂಧಿಸಿದ್ದಲ್ಲ. ಮೂವಿ ಮಾಫಿಯಾದವರು ಮನೆಯಲ್ಲಿ ಅಡಗಿ ಕುಳಿತು, ಆಯ್ಕೆ ಸಮಿತಿಯ ಸದಸ್ಯರಿಗೆ ಕೆಲಸ ಮಾಡುವುದಕ್ಕೆ ಬಿಟ್ಟಿರುವುದು ಬಹಳ ಸಂತೋಷದ ವಿಷಯ. 'ಜಲ್ಲಿಕಟ್ಟು' ತಂಡದವರಿಗೆ ಶುಭಾಶಯಗಳು' ಎಂದು ಅವರು ಬರೆದುಕೊಂಡಿದ್ದರು.

ಹೀಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಈ ಚಿತ್ರವು, ಅಂತಿಮವಾಗಿ ಸ್ಪರ್ಧೆಯಿಂದ ಹೊರಬಿದ್ದಿದೆ. 'ಬಿಟ್ಟು' ಚಿತ್ರವಾದರೂ ಪ್ರಶಸ್ತಿ ಪಡೆಯುತ್ತದಾ ಎಂದು ಕಾದು ನೋಡಬೇಕಿದೆ.