ಬೆಂಗಳೂರು: ಸಿನಿಮಾ ಜೊತೆಗೆ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್ ಅಭಿನಯದ ಹೊಸ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾದ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲಿದೆ.
‘ರಾಘವೇಂದ್ರ ಸ್ಟೋರ್ಸ್’ ಹಾಗೂ ‘ತೋತಾಪುರಿ’ ಸರಣಿ ಸಿನಿಮಾಗಳ ಬಳಿಕ ಪ್ರೇಕ್ಷಕರನ್ನು ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ ನವರಸನಾಯಕ. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಮಗದೊಮ್ಮೆ ಜಗ್ಗೇಶ್‌ಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ‘ರಂಗನಾಯಕ’ ಮಾರ್ಚ್ 8ರಂದು ಬಿಡುಗಡೆಯಾಗಲಿದೆ.
ಯಾವುದೇ ಲಾಜಿಕ್ ಇಲ್ಲದ ಕೇವಲ ನಗೆಯ ಗಲಭೆ ಎಬ್ಬಿಸಲಿದ್ದೇವೆ. ನಿಮ್ಮನ್ನು ನಗೆಗಡಲಲ್ಲಿ ತೇಲಿಸಬೇಕೆಂದು ಇಬ್ಬರು ಹಟತೊಟ್ಟು ಚಿತ್ರಿಸಿದ್ದೇವೆ ಎಂದು ‘ರಂಗನಾಯಕನ’ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದಾರೆ ನಿರ್ದೇಶಕ ಗುರುಪ್ರಸಾದ್. ಈ ಚಿತ್ರದ 'ಗಾಳಿ ತಂಗಾಳಿ' ಸಾಂಗ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದರ ಜೊತೆಗೆ ವಿವಾದ ಸೃಷ್ಟಿಸುವ ಎಲ್ಲ ಲಕ್ಷಣ ಕಾಣ್ತಿದೆ. ಬಿಗ್‌ಬಾಸ್ ಶ್ರುತಿ, ಮೀಟು ಶ್ರುತಿ ಎನ್ನುವ ಸಾಲುಗಳು ಕೆಲವರ ಹುಬ್ಬೇರಿಸಿದೆ.
ಶಾರದಾಸುತ ಸಾಹಿತ್ಯ ಹಾಡಿಗೆ ಅನೂಪ್ ಸಿಳೀನ್ ಮ್ಯೂಸಿಕ್ ಮಾಡಿ ಹಾಡಿದ್ದಾರೆ. ಇನ್ನು ಹಾಡಿನಲ್ಲಿ ಮೀಟು ಶ್ರುತಿ ಎನ್ನುವ ಸಾಲು ಬಳಸಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆ ನಿರ್ದೇಶಕ ಗುರುಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಜಗ್ಗೇಶ್ ಹಾಡು ಹಾಡುವಾಗ ಕತ್ತೆಗಳು ಹಾಡುತ್ತವೆ. ಅದು ಶ್ರುತಿ ಬಿಟ್ಟು ಹಾಡುತ್ತಿದ್ದಾಗ ಸಂಗೀತ ಪ್ರಕಾರದ ಶ್ರುತಿ ಬಗ್ಗೆ ಹೇಳುವಂತಹದ್ದು ಎಂದಿದ್ದಾರೆ. ಇದಕ್ಕೂ ಮುನ್ನ ಬಂದಿದ್ದ ಹಾಡಿನ ಟೀಸರ್‌ನಲ್ಲಿ ಶ್ರುತಿ ಅವರನ್ನು ಕತ್ತೆಗೆ ಹೋಲಿಸಿದ್ದಾರಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಇದೆಲ್ಲದರ ಬಗ್ಗೆ ಗುರುಪ್ರಸಾದ್ ಮಾತನಾಡಿದ್ದಾರೆ.
ಇದರ ಸಂಬಂಧ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಶ್ರುತಿ ಹರಿಹರನ್ ಮೂಲ ಕನ್ನಡ ಅಲ್ಲ. ಎಲ್ಲಿಂದಲೋ ಬಂದು ಕನ್ನಡದಲ್ಲಿ ರಾಡಿ ಎಬ್ಬಿಸಿದರು. ಆ ಘಟನೆಗಳ ಸಂಪೂರ್ಣ ಮಾಹಿತಿ ನನಗೆ ಗೊತ್ತು. ಸೀಕ್ರೆಟ್ ಗೊತ್ತಿತ್ತು. ಹಾಗಾಗಿ ನನಗೆ ಕೋಪ ಇತ್ತು. ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ. ಹೇಳಬೇಕಿತ್ತು. ಆಕೆಯ ಧೋರಣೆಗೆ ಧಿಕ್ಕಾರ ಕೂಗಬೇಕಿತ್ತು. ಹಾಗಾಗಿ ಮೀಟು ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರೋದು ಎಂದಿದ್ದಾರೆ.
ಮೀಟು ಅನ್ನೋದು ಪ್ರಪಂಚದಲ್ಲಿ ಇಲ್ಲದೇ ಇರುವುದೇ? ಕನ್ನಡ ಚಿತ್ರರಂಗ ಅಂತ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಇಲ್ಲದೇ ಇರೋದಾ? ಗಂಡು ಹೆಣ್ಣು ಆತ್ಮೀಯವಾಗಿ ಒಪ್ಪಿಕೊಂಡು ಅವರಿಬ್ಬರು ಏನಾದರೂ ವ್ಯವಸ್ಥೆ ಮಾಡಿಕೊಂಡರೆ ಮುಗೀತು. ಸುಪ್ರೀಂ ಕೋರ್ಟ್ ಓಕೆ ಮಾಡಿದೆ. ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರು ಯಾರಿದ್ದಾರೆ? ಈಗ ಒಬ್ಬ ಹೆಣ್ಣು ಮಗಳು ಕೈಯಲ್ಲಿ ಹಿಡ್ಕೊಂಡು ಹೋಗುತ್ತಿದ್ದಾಗ ಅದನ್ನು ಕಳ್ಳ ಕಿತ್ತುಕೊಂಡು ಹೋದ್ರೆ, ಅವತ್ತೇ ಹೋಗಿಕೊಳ್ತಾಳಾ? ಅಥವಾ ಆ ವರ್ಷ ಆದಮೇಲೆ ಕೂಗಿಕೊಳ್ತಾಳಾ? ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ. ಅವತ್ತು ಹಂಗೆ ಕೇಳಿದ್ದರು ಅಂತ ಹೇಳ್ತಿದ್ದಾರೆ. ಆತನ ಹೆಂಡ್ತಿಗೆ ಹೋಗಿ ಹೇಳಬೇಕಿತ್ತು. ನಿನ್ನ ಗಂಡ ಹೀಗೆ ಕೇಳ್ತಿದ್ದಾರೆ ಅಂತ. ಸಮಸ್ಯೆ ಬಗೆಹರಿಯುತ್ತಿತ್ತು ಎಂದಿದ್ದಾರೆ.
"ನನ್ನ ಮೇಲೆ ಆಸೆಪಟ್ಟಿದ್ದಾನೆ, ಮಲಗು ಎನ್ನುತ್ತಿದ್ದಾನೆ ಎಂದು ಹೇಳಿಬಿಟ್ಟಿದ್ದರೆ ನಿನ್ನ ನಿಜಾಯಿತಿ ಒಪ್ಪುತ್ತಿದ್ದೆವು. ನೀನು ಕನ್ನಡವಳು ಅಲ್ಲ, ಇಲ್ಲಿ ಬಂದು ಇಂತಹವರು ಹೀಗೆ ಕೇಳಿದ್ರು ಅಂತ, ತಾನು ಪತಿವ್ರತೆ ಅಂತ ಪ್ರೂವ್ ಮಾಡೋಕೆ ಹೊರಟುಬಿಟ್ಟಿದ್ದಳು ಆಕೆ. ಯಾಕೆ ಬೇಕಿತ್ತು ಅದು. ನಂತರ ಒಬ್ಬ ನಾಯಕ ನಟ ಅವಳನ್ನು ಹೀರೊಯಿನ್ ಮಾಡಿ ಅಂತ ನನ್ನ ಬಳಿ ಬಂದಿದ್ದ. ಬೇರೆ ಬೇರೆ ಕಾರಣಕ್ಕೆ ಅವರವರ ಸಂಬಂಧಗಳು ಏನಿರುತ್ತೋ, ನಮಗ್ಯಾಕೆ ಬೇಕು ಎಂದು ಹೇಳಿದರು.
ಮೀಟು ಶ್ರುತಿ ಅಂತ ಒಬ್ಬ ಹುಡುಗಿ ಇದ್ದಾಳೆ. ಅವಳು ಕನ್ನಡದ ನೆಲದಲ್ಲಿ ರಾಡಿ ಎಬ್ಬಿಸಿದಳು. ನಮಗೆ ಬೇಕಿರುವ ಸಿನಿಮಾ ನಾವು ಮಾಡಿಕೊಳ್ತೀವಿ. ಆಕೆ ತಮಿಳು, ಮಲಯಾಳಂ ನನಗೆ ಗೊತ್ತಿಲ್ಲ. ಆ ಮೂಲದವರು ಬಂದು ಹಾಗೆ ಮಾತನಾಡಿದ್ದು, ಯಾಕೆ ಮಾತನಾಡಿದರು ಎನ್ನುವುದು ಗೊತ್ತಿಲ್ಲ. ಅದನ್ನು ಸಾಂದರ್ಭಿಕವಾಗಿ ನಮ್ಮ ಸಿನಿಮಾ ಹಾಡಿನಲ್ಲಿ ತಂದಿದ್ದೇನೆ ಎಂದಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ಬಳಸಿರುವ ಪದಗಳ ಬಗ್ಗೆ ನೆಟ್ಟಿಗರು ಚಕಾರ ಎತ್ತಿದ್ದಾರೆ. ಒಂದು ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಗುರು ಬೆಂಬಲಕ್ಕೆ ನಿಂತಿದ್ದು ಅವರು ಮಾಡಿದ್ದು ಸರಿ ಎನ್ನುತ್ತಿದ್ದಾರೆ.