ಬೆಂಗಳೂರು: "ಹೌದು ನನಗೂ ಮತ್ತು ನಟಿ ಸೌಂದರ್ಯಗೂ ಸಂಬಂಧ ಇತ್ತು. ಅವಳಷ್ಟೇ ಆಕೆಯ ಸಹೋದರ ಸಹ ನನಗೆ ಹೆಚ್ಚು ಆತ್ಮೀಯ. ಆಗಾಗ ಸೌಂದರ್ಯ ಮನೆಗೆ ಹೋಗುತ್ತಿದೆ, ಅವಳನ್ನೂ ಭೇಟಿಯಾಗುತ್ತಿದೆ. ಆದರೆ, ಜನ ನಮ್ಮನ್ನು ನೋಡುವ ರೀತಿಯೇ ಬೇರೆಯಾಗಿತ್ತು. ನಮ್ಮಿಬ್ಬರ ಸಂಬಂಧವನ್ನು ಜನ ಅರ್ಥ ಮಾಡಿಕೊಳ್ಳಲೇ ಇಲ್ಲ. ಸಹಜವಾಗಿ ಜನ ನಮ್ಮಿಬ್ಬರ ಅನ್ಯೋನ್ಯತೆ ನೋಡಿ ದೈಹಿಕ ಸಂಬಂಧ ಇರಬಹುದು ಎಂದೇ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅದಕ್ಕಿಂತ ಮಿಗಿಲಾದ ಒಳ್ಳೆಯ ಸಂಬಂಧ ನಮ್ಮದಾಗಿತ್ತು' ಎಂದು ಹಲವು ವರ್ಷಗಳ ಹಿಂದೆ ಹರಿದಾಡಿದ್ದ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ ಬಾಲಿವುಡ್ ನಟ ಜಗಪತಿ.
ಹೌದು, 2004ರಲ್ಲಿ ದುರಂತ ಅಂತ್ಯ ಕಂಡ ಬಹುಭಾಷಾ ನಟಿ ಸೌಂದರ್ಯ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಕಾಂಟ್ರವರ್ಸಿ ವಿಚಾರಕ್ಕೆ ಎಂಬುದಿಲ್ಲಿ ವಿಶೇಷ! ಅಂದರೆ, ಟಾಲಿವುಡ್ ನಟ ಜಗಪತಿ ಬಾಬು ಇತ್ತೀಚೆಗಷ್ಟೇ "ನನ್ನ ಮತ್ತು ಸೌಂದರ್ಯ ನಡುವೆ ಸಂಬಂಧವಿತ್ತು' ಎಂದು ಹೇಳಿಕೆ ನೀಡಿ ದಶಕದ ಹಿಂದಿನ ರಹಸ್ಯವನ್ನು ಹೇಳಿಕೊಂಡಿದ್ದಾರೆ.
ಸಿನಿಮಾಕ್ಷೇತ್ರದಲ್ಲಿ ಒಳ್ಳೇ ಹೆಸರು, ಸ್ಥಾನಮಾನ ಸಿಗುತ್ತಿದ್ದಂತೆ ಗಾಸಿಪ್ಗಳೂ ತಂತಾನೇ ಜೀವತಾಳುತ್ತವೆ. ಆ ಪ್ರಸಂಗ ಸೌಂದರ್ಯ ಬಾಳಿನಲ್ಲೂ ಒಂದೊದಗಿತ್ತು. ಹಲವು ಸಿನಿಮಾ ಮಂದಿ ಜತೆ ಸೌಂದರ್ಯ ಹೆಸರು ತಳುಕು ಹಾಕಿಕೊಂಡಿತ್ತು ಎಂಬ ಸುದ್ದಿಯೂ ಹರಿದಾಡಿತ್ತು. ಆ ಸಾಲಿನಲ್ಲಿ ಜಗಪತಿ ಬಾಬು ಸಹ ಒಬ್ಬರು.
ಸೌಂದರ್ಯ ಮೂಲತಃ ಕನ್ನಡದವರಾದರೂ ಸ್ಯಾಂಡಲ್ವುಡ್ ಜತೆಗೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ನಲ್ಲಿಯೂ ಗುರುತಿಸಿಕೊಂಡವರು. ಅದೇ ರೀತಿ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಅಲ್ಲಿನ ಸಿನಿ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ನಟ ಜಗಪತಿ ಬಾಬು ಜತೆಗೆ "ದೊಂಗಾಟ', "ಅಂತಃಪುರಂ', "ಪ್ರಿಯಾರಾಗಲು', "ಪೆಳ್ಳಿ ಪೀತಲು' ಸೇರಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಸಾಲು ಸಾಲು ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದನ್ನು ನೋಡಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಆವತ್ತೇ ಟಾಲಿವುಡ್ ಅಂಗಳದಲ್ಲಿ ಹರಿದಾಡಿದ್ದವು. ಆಗ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ತಾವಾಯ್ತು ತಮ್ಮ ಕೆಲಸವಾಯ್ತು ಅಷ್ಟರಲ್ಲೇ ಬಿಜಿಯಾಗಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ ನಟಿ ಸೌಂದರ್ಯ 2004ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ಅಲ್ಲಿಂದ ಈ ಗುಸುಗುಸು ಸುದ್ದಿಯೂ ಕೊನೆಯಾಯ್ತು. ಆವತ್ತಿನ ಆ ಗಳಿಗೆಯನ್ನು ಇದೀಗ ಜಗಪತಿ ಮತ್ತೆ ನೆನೆದಿದ್ದಾರೆ.