ಬೆಂಗಳೂರು: ‘ಕಿಚ್ಚ’ ಸುದೀಪ್ ನಟಿಸುತ್ತಿರುವ ‘ಫ್ಯಾಂಟಮ್ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲ, ಬಹುಭಾಷೆಗಳಲ್ಲಿ ತೆರೆಕಾಣಲಿದೆ ಎಂಬ ವಿಚಾರ ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಇದೇ ಸಿನಿಮಾಕ್ಕೆ ಬಾಲಿವುಡ್ನ ಖ್ಯಾತ ನಟಿಯ ಆಗಮನವೂ ಅಧಿಕೃತವಾಗಿದೆ.
ಸುದೀಪ್ ಜತೆ ಜಾಕ್ಲೀನ್ ಫರ್ನಾಂಡೀಸ್ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹೊರಬಿದ್ದಿತ್ತಾದರೂ, ಅದು ಅಂತಿಮವಾಗಿರಲಿಲ್ಲ. ಈಗ ಚಿತ್ರದ ನಿರ್ಮಾಪಕ ಜಾಕ್ ಮಂಜು, ಜಾಕ್ಲೀನ್ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಸುದೀಪ್ ಅವರೊಂದಿಗೆ ಜಾಕ್ಲೀನ್ ಹಾಡಿನಲ್ಲಿ ಕಾಣಿಸುವುದು ಅಧಿಕೃತವಾಗಿದೆ. ಅವರು ಯಾವಾಗ ಬರಲಿದ್ದಾರೆ, ಆ ಹಾಡಿನ ರೂಪುರೇಷೆ ಹೇಗಿರಲಿದೆ ಎಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಸದ್ಯಕ್ಕೆ ಅವರಿಂದ ಒಪ್ಪಿಗೆ ಸಿಕ್ಕಿದೆ. ಆರೇಳು ದಿನ ತಂಡದ ಜತೆಗಿರಲಿದ್ದಾರೆ’ ಎಂದಿದ್ದಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ಒಂದಷ್ಟು ಭಾಗದ ಚಿತ್ರೀಕರಣ ಮಾಡಿಕೊಂಡಿರುವ ‘ಫ್ಯಾಂಟಮ್ ತಂಡ, ಚಿತ್ರದ ಶೇ. 90 ಭಾಗದ ಶೂಟಿಂಗ್ ಮುಗಿಸಿಕೊಂಡಿದೆ. ಇನ್ನೆರಡು ಹಾಡುಗಳ ಚಿತ್ರೀಕರಣ ಆದರೆ, ಸಿನಿಮಾ ಮುಕ್ತಾಯವಾದಂತೆ.
‘ಮಾತಿನ ಭಾಗದ ಬಹುತೇಕ ಎಲ್ಲ ಕೆಲಸಗಳು ಮುಗಿದಿವೆ. ಉಳಿದಿರುವುದು ಎರಡು ಹಾಡಿನ ಕೆಲಸ. ಅದರಲ್ಲಿ ಒಂದು ಹಾಡಿನಲ್ಲಿ ಜಾಕ್ಲೀನ್ ಇರಲಿದ್ದಾರೆ. ಇದರ ಜತೆಗೆ ದುಬೈನ ಬುರ್ಜ್ ಖಲೀಫಾದಲ್ಲಿಯೂ ಟೀಸರ್ ಕುರಿತು ಪ್ರಮೋಷನ್ ಇವೆಂಟ್ ಆಯೋಜನೆ ಮಾಡಲಿದ್ದೇವೆ’ ಎಂಬುದು ಜಾಕ್ ಮಂಜು ಮಾತು. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿ ಯಾರು ಎಂಬ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಇನ್ನುಳಿದಂತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿ ಹಲವು ನಟ, ನಟಿಯರು ಈ ಸಿನಿಮಾದಲ್ಲಿದ್ದಾರೆ.