ಸಿನಿವಾಣಿ

ಕೊನೆಗೂ ನನಸಾಗಲೇ ಇಲ್ಲ ಜಾಕಿ ಕನಸು!

ಬಾಲಿವುಡ್‌ನ ಸ್ಟೈಲಿಶ್ ನಟ ಎಂದು ಗುರುತಿಸಲ್ಪಡುವ ಜಾಕಿ ಶ್ರಾಫ್​, ತಮ್ಮ ಮನಸ್ಸಿನ ಮಾತುಗಳನ್ನು ಯಾವತ್ತೂ ಮುಚ್ಚಿಡುವುದಿಲ್ಲ. ಮನಸ್ಸಿನಲ್ಲೇನಿದೆಯೋ ಅದನ್ನು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ನನಸಾಗದ ಕನಸೊಂದರ ಬಗ್ಗೆ ಜಾಕಿ ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಆ ಕನಸೇನು ಎಂದು ಆಶ್ಚರ್ಯವಾಗಬಹುದು. ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಜತೆಗೆ ನಟಿಸಬೇಕು ಎಂದು ಜಾಕಿಗೆ ಬಹಳ ಆಸೆ ಇತ್ತಂತೆ. ರಿಷಿ ನಿಧನದಿಂದ ಆ ಕನಸು ಕೊನೆಗೂ ನನಸಾಗಲೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಹಾಗಾದರೆ, ಇಷ್ಟು ವರ್ಷಗಳಲ್ಲಿ ರಿಷಿ ಮತ್ತು ಜಾಕಿ ಒಟ್ಟಿಗೆ ನಟಿಸಲೇ ಇಲ್ಲವಾ ಎಂಬ ಪ್ರಶ್ನೆ ಸಹಜ. ಹಾಗೇನಿಲ್ಲ. ಇಬ್ಬರೂ ‘ಆಜಾದ್ ದೇಶ್ ಕೇ ಗುಲಾಮ್​’, ‘ಔರಂಗಜೇಬ್’, ‘ಚಾಕ್ ಆ್ಯಂಡ್ ಡಸ್ಟರ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದೇ ಚಿತ್ರದಲ್ಲಿ ಇಬ್ಬರೂ ಇದ್ದಾರೆ ಎನ್ನುವುದು ಬಿಟ್ಟರೆ, ಇಬ್ಬರೂ ಜತೆಯಾಗಿ ತೆರೆ ಹಂಚಿಕೊಂಡಿಲ್ಲ ಎಂಬ ಬೇಸರ ಜಾಕಿ ಅವರದ್ದು.

ಈ ಕುರಿತು ಮಾತನಾಡಿರುವ ಅವರು, ‘ನಾವಿಬ್ಬರೂ ಜತೆಯಾಗಿ ನಟಿಸಬೇಕು ಅಂತ ಬಹಳ ಆಸೆ ಇತ್ತು. ನನಗೊಬ್ಬನಿಗೇ ಅಲ್ಲ, ಅವರಿಗೂ ಇತ್ತು. ನಾವಿಬ್ಬರೂ ಜತೆಯಾಗಿ ನಟಿಸಬೇಕು ಅಂತ ಅವರು ಹೇಳುತ್ತಲೇ ಇದ್ದರು. ಆದರೆ, ಅವರ ನಿಧನದಿಂದ ಇದು ಯಾವತ್ತೂ ಸಾಧ್ಯವಾಗುವುದಿಲ್ಲ’ ಎಂದು ಜಾಕಿ ಹೇಳಿಕೊಂಡಿದ್ದಾರೆ.

ರಿಷಿ ಕಪೂರ್ ವಿಷಯದಲ್ಲಿ ಎಲ್ಲವೂ ಇಷ್ಟ ಎಂದಿದ್ದಾರೆ ಜಾಕಿ. ‘ಅವರು ಮಾಡಿದ್ಯಾವುದೂ ನನ್ನಿಂದ ಸಾಧ್ಯವಾಗಲೇ ಇಲ್ಲ. ಅವರ ತರಹ ಡ್ಯಾನ್ಸ್ ಮಾಡುವುದಕ್ಕಾಗಲೀ, ರೊಮ್ಯಾನ್ಸ್ ಮಾಡುವುದಕ್ಕಾಗಲೀ ನನ್ನಿಂದ ಆಗುವುದಿಲ್ಲ. ಚಿಕ್ಕಂದಿನಿಂದಲೂ ಅವರನ್ನು ಕಂಡರೆ ಬಹಳ ಇಷ್ಟ. ನಮ್ಮಿಬ್ಬರ ಮಧ್ಯೆ ಒಳ್ಳೆಯ ಗೆಳತನವಿತ್ತು’ ಎಂದು ಅಗಲಿದ ನಟನನ್ನು ನೆನಪಿಸಿಕೊಂಡಿದ್ದಾರೆ ಜಾಕಿ.