Nayanthara : ದಕ್ಷಿಣ ಭಾರತ ಸಿನಿ ರಂಗದಲ್ಲಿ ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ ಅವರು ನಿನ್ನೆಯಷ್ಟೇ (ನ.18) 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಈ ವಯಸ್ಸಿನಲ್ಲೂ ಸೌತ್ ಬ್ಯೂಟಿ ನಯನತಾರಾ 20ರ ಯುವನಟಿಯಂತೆ ಕಂಗೊಳಿಸುತ್ತಾರೆ. ಹೀಗಾಗಿ ನಿಮ್ಮ ಸೌಂದರ್ಯದ ರಹಸ್ಯವೇನು ಎಂಬ ಪ್ರಶ್ನೆಗೆ ಆಗಾಗ ನಯನತಾರಾಗೆ ಎದುರಾಗುತ್ತಲೇ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದ ಮೂಲಕ, ತಮ್ಮ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ತಾನು ನಿತ್ಯವೂ ಅನುಸರಿಸುತ್ತಿರುವ ಜೀವನ ಅಭ್ಯಾಸಗಳ ಬಗ್ಗೆ ಸ್ವತಃ ನಯನತಾರಾ ಬಹಿರಂಗಪಡಿಸಿದ್ದರು.
ದೀರ್ಘಕಾಲದವರೆಗೆ ನಾನು ಆಹಾರ ಪದ್ಧತಿ ಎಂದರೆ ಕೇವಲ ನಿರ್ಬಂಧಗಳು ಮತ್ತು ನಾನು ಇಷ್ಟಪಡದ ಆಹಾರಗಳನ್ನು ತಿನ್ನುವುದೆಂದೇ ಭಾವಿಸಿದ್ದೆ. ಆದರೆ, ನಾನೀಗ ಸರಿಯಾಗಿ ಅರ್ಥಮಾಡಿಕೊಂಡಿದ್ದೇನೆ, ಇದು ಕೇವಲ ಕ್ಯಾಲೋರಿಗಳನ್ನು ಎಣಿಸುವ ಬಗ್ಗೆ ಅಲ್ಲ, ಬದಲಾಗಿ ಪೋಷಕಾಂಶಗಳನ್ನು ಎಣಿಸುವ ಬಗ್ಗೆ. ವಿಭಿನ್ನ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವ ಮೂಲಕ ಸ್ಥಿರತೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ನಟಿ ನಯನತಾರಾ ಸಲಹೆ ನೀಡುತ್ತಾರೆ.
ಇದೇ ಸಂದರ್ಭದಲ್ಲಿ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಪೌಷ್ಟಿಕತಜ್ಞ ಮುನ್ಮುನ್ ಗನೇರಿವಾಲ್ ಅವರನ್ನು ಸಹ ನಯನತಾರಾ ಅಭಿನಂದಿಸಿದ್ದಾರೆ.
ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಮತ್ತು ರುಚಿಕರವಾದ ಆಹಾರವನ್ನು ತಿನ್ನಲು ನಾನು ಇಷ್ಟಪಡುತ್ತೇನೆ. ತಿನ್ನುವಾಗ ತುಂಬಾ ಸಂತೋಷದಿಂದ ಮತ್ತು ಪಾಪಪ್ರಜ್ಞೆ ಇಲ್ಲದೇ ತಿನ್ನಲು ಬಯಸುತ್ತೇನೆ. ಇದೇ ನನ್ನ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು ಎಂದಿರುವ ನಯನತಾರಾ, ಜಂಕ್ ಫುಡ್ ಬಗ್ಗೆ ಕೊಂಚವೂ ಆಸಕ್ತಿ ಇಲ್ಲ ಎಂದಿದ್ದಾರೆ. ನನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡ ನಂತರ ಜೀವನದಲ್ಲಿ ಚೈತನ್ಯ ಮತ್ತು ಸಂತೋಷದಿಂದ ಇರಲು ಸಾಧ್ಯವಾಗಿದೆ ಎಂದು ನಯನತಾರಾ ತಿಳಿಸಿದ್ದಾರೆ.
ಸಂತೋಷ ಮತ್ತು ಸಂತೃಪ್ತಿಯಿಂದ ತಿನ್ನುವುದರಿಂದ ಆಹಾರದೊಂದಿಗೆ ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ನಯನತಾರಾ ಅವರ ಆಹಾರ ನೀತಿಯಾಗಿದೆ. ಆಹಾರವನ್ನು ನಾವು ಸಂತೋಷ ಮತ್ತು ಚೈತನ್ಯದ ಮೂಲವೆಂದು ಪರಿಗಣಿಸಬೇಕು. ಸಂತೃಪ್ತಿ ಮತ್ತು ಕೃತಜ್ಞತೆಯಿಂದ ಆಹಾರವನ್ನು ಸೇವಿಸಿದಾಗ ಮಾತ್ರ ಅಪೌಷ್ಟಿಕತೆ ಅಥವಾ ಅತಿಯಾದ ಸೇವನೆಯನ್ನು ಅನುಭವಿಸುವ ಸಾಧ್ಯತೆ ಕಡಿಮೆ ಎಂದು ನಯನತಾರಾ ಹೇಳುತ್ತಾರೆ.
ಅಂದಹಾಗೆ ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದಾರೆ. ಈ ವಿವಾದ ತೀವ್ರಸ್ವರೂಪದ ಪಡೆದಿದೆ. ಈ ನಡುವೆಯೇ ನಯನತಾರಾ ಸೋಮವಾರ (ನ.18) 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ‘ಬಿಯಾಂಡ್ ದ ಫೈರಿಟೇಲ್’ ರಿಲೀಸ್ ಆಗಿದೆ. ಹೊಸ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಘೋಷಣೆಯಾಗಿದೆ. ಚಿತ್ರದ ಹೆಸರು ‘ರಕ್ಕಾಯಿ’.
ರಕ್ಕಾಗಿ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸೆಂಥಿಲ್ ನಲ್ಲಸ್ವಾಮಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಹಳ್ಳಿ ಲುಕ್‌ನಲ್ಲಿ ಕೈಯಲ್ಲಿ ಕೊಡಲಿ ಹಿಡಿದು ರೆಬೆಲ್ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದು, ‘ನ್ಯಾಯವೇ ಇಲ್ಲದ ನಾಡಿನಲ್ಲಿ ಒಬ್ಬ ತಾಯಿ ವಾಸಿಸುತ್ತಿದ್ದಳು. ಅವಳ ಪ್ರಪಂಚವೇ ತನ್ನ ಮಗುವಾಗಿತ್ತು. ಆದರೆ, ಮಗುವಿನ ಜೀವಕ್ಕೆ ಬೆದರಿಕೆ ಬಂದಾಗ, ಆಕೆ ಓಡುವುದಿಲ್ಲ. ಬದಲಾಗಿ ಯುದ್ಧ ಘೋಷಿಸುತ್ತಾಳೆ’ ಎಂದು ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ‘ರಕ್ಕಾಯಿ’ ಜತೆಗೆ ‘ಮಣ್ಣನ್‌ಗಟ್ಟಿ 1960’, ‘ತನಿ ಒರುವನ್-2’, ‘ಡಿಯರ್ ಸ್ಟೂಡೆಂಟ್ಸ್’ ಚಿತ್ರಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. (ಏಜೆನ್ಸೀಸ್)