ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಆಂಧ್ರ ಸರ್ಕಾರದಿಂದ ಅತ್ಯುತ್ತಮ ಗಾಯನ, ಸಂಗೀತ ನಿರ್ದೇಶನ, ಅಭಿನಯಕ್ಕೆ ಸೇರಿ 24 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರಗಳಿಗೆ ಹಾಡಿದ್ದಿಕ್ಕೆ ರಾಜ್ಯ ಸರ್ಕಾರದಿಂದ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳು ಎಷ್ಟು ಗೊತ್ತಾ? ಕೇವಲ ಮೂರು.
ವಿಷಯ ಕೇಳಿ ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಈ ಪೈಕಿ ನೂರಾರು ಹಾಡುಗಳು ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ. ಹೀಗಿರುವಾಗ, ಅವರಿಗೆ ಸಿಕ್ಕಿರುವುದು ಕೇವಲ ಮೂರೇ ಮೂರು ಪ್ರಶಸ್ತಿಗಳು ಎಂದರೆ ಸಹಜವಾಗಿ ಆಶ್ಚರ್ಯವಾಗದೇ ಇರದು.
ಅದರಲ್ಲೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕರ್ನಾಟಕ ಸರ್ಕಾರದಿಂದ ಮೊದಲು ಪ್ರಶಸ್ತಿ ಪಡೆಯುವುದಕ್ಕೆ 30 ವರ್ಷಗಳ ಕಾಲ ಕಾಯಬೇಕಾಯಿತು. ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 'ನಕ್ಕರೆ ಅದೇ ಸ್ವರ್ಗ' ಚಿತ್ರದ 'ಕನಸಿದೋ ಮನಸಿದೋ' ಹಾಡಿನ ಮೂಲಕ. ಈ ಚಿತ್ರ ಬಿಡುಗಡೆಯಾಗಿದ್ದು 1967ರಲ್ಲಿ. ಆದರೆ, ಅವರು ಮೊದಲು ಪ್ರಶಸ್ತಿ ಪಡೆದಿದ್ದು 'ಓ ಮಲ್ಲಿಗೆ' ಚಿತ್ರದ 'ನೇಚರೇ ನಮ್ ಟೀಚರು ...' ಹಾಡಿಗೆ. ಈ ಚಿತ್ರ ಬಿಡುಗಡೆಯಾಗಿದ್ದು 1997ರಲ್ಲಿ. ಅಲ್ಲಿಗ ಮೊದಲ ಪ್ರಶಸ್ತಿ ಪಡೆಯುವುದಕ್ಕೆ ಅವರು 30 ವರ್ಷಗಳ ಕಾಲ ಕಾಯಬೇಕಾಯಿತು.
ಇಷ್ಟಕ್ಕೂ ಏಕೆ ಅಷ್ಟು ತಡವಾಯಿತು ಎಂಬ ಪ್ರಶ್ನೆ ಸಹಜ. ಪ್ರಮುಖವಾಗಿ ಕನ್ನಡೇತರರಿಗೆ ರಾಜ್ಯ ಸರ್ಕಾರದಿಂದ ರಾಜ್ಯ ಪ್ರಶಸ್ತಿಗಳನ್ನು ಕೊಡುವ ಪರಿಪಾಠವಿರಲಿಲ್ಲ. ಎಸ್ಪಿಬಿಯವರು ಮೂಲತಃ ಆಂಧ್ರದವರಾದ್ದರಿಂದ, ಅವರಿಗೆ ಸಹಜವಾಗಿಯೇ ಪ್ರಶಸ್ತಿ ಸಿಕ್ಕಿರಲಿಲ್ಲ. ಇನ್ನು ಕನ್ನಡದಲ್ಲಿ ನೂರಾರು ನೆನಪಿನಲ್ಲುಳಿಯುವಂತಹ ಹಾಡುಗಳನ್ನು ಹಾಡಿದರೂ, ಪ್ರಶಸ್ತಿ ಸಿಗಲಿಲ್ಲ ಎಂಬ ಬೇಸರ ಎಸ್;ಪಿ.ಬಿ ಅವರಿಗೆ ಇತ್ತು.
ಕೊನೆಗೆ 1997ರಲ್ಲಿ ರಾಜ್ಯ ಸರ್ಕಾರದಿಂದ ಅವರಿಗೆ 'ಓ ಮಲ್ಲಿಗೆ' ಚಿತ್ರದ ಗಾಯನಕ್ಕಾಗಿ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಯಿತು. ಆ ನಂತರ 'ಸೃಷ್ಟಿ' ಮತ್ತು 'ಸವಿಸವಿ ನೆನಪು' ಚಿತ್ರಗಳ ಹಾಡುಗಳಿಗಾಗಿ ಅತ್ಯುತ್ತಮ ಗಾಯಕ ಪ್ರಶಸ್ತಿ ಅವರಿಗೆ ಸಿಕ್ಕಿದೆ.