Nayanthara : ವಿವಾದದ ನಡುವೆಯೇ ನ.18ರಂದು ಲೇಡಿ ಸೂಪರ್ಸ್ಟಾರ್ ನಯನತಾರಾ ಅವರ ಜೀವನಾಧಾರಿತ ಸಾಕ್ಷ್ಯಚಿತ್ರ ‘ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್’ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. 40ನೇ ವಸಂತಕ್ಕೆ ಕಾಲಿಟ್ಟ ದಿನದಂದೇ ನಯನತಾರಾಗೆ ಸಾಕ್ಷ್ಯಚಿತ್ರವು ಹುಟ್ಟುಹಬ್ಬದ ಗಿಫ್ಟ್ ಆಗಿ ಸಿಕ್ಕಿದೆ. ಸಾಮಾನ್ಯ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಸ್ಟಾರ್ ನಟಿ ಪಟ್ಟಕೇರುವುದರ ನಡುವೆ ನಯನತಾರಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಲವ್ ಲೈಫ್ನಲ್ಲೂ ಸಾಕಷ್ಟು ನೋವು ಅನುಭವಿಸಿದ್ದು, ಇದೆಲ್ಲವನ್ನು ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದ ಕ್ಷಣಗಳೇ ಸಾಕ್ಷ್ಯಚಿತ್ರದ ಹೈಲೈಟ್ಸ್.
ನಯನತಾರಾ ಮತ್ತು ವಿಘ್ನೇಶ್ ನಡುವಿನ ಪ್ರೇಮ ಸಂಬಂಧ ಬಹಿರಂಗವಾದಾಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಇಬ್ಬರನ್ನು ಸೌಂದರ್ಯ ಮತ್ತು ಮೃಗಕ್ಕೆ ( beauty and the beast) ಹೋಲಿಕೆ ಮಾಡಿ ಮೀಮ್ಸ್ ಹರಿಬಿಟ್ಟಿದ್ದನ್ನು ವಿಘ್ನೇಶ್, ಸಾಕ್ಷ್ಯಚಿತ್ರದಲ್ಲಿ ನೆನೆದಿದ್ದಾರೆ. ಅಲ್ಲದೆ, ಬೇಸರ ಸಹ ಹೊರಹಾಕಿದ್ದು, ಟ್ರೋಲ್ ಮಾಡಿದವರಿಗೆ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಒಂದು ಮೀಮ್ ತುಂಬಾ ವೈರಲ್ ಆಗಿತ್ತು. ಸೌಂದರ್ಯವು ಪ್ರಾಣಿಯನ್ನು ಆಯ್ಕೆ ಮಾಡಿಕೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮೀಮ್ನಲ್ಲಿ ಬರೆಯಲಾಗಿತ್ತು. ಅಲ್ಲದೆ, ಮತ್ತೊಂದು ಮೀಮ್ನಲ್ಲಿ ನನ್ನನ್ನು ನಾಯಿಗೆ ಹೋಲಿಕೆ ಮಾಡಲಾಗಿತ್ತು. ನಾಯಿಯ ಮುಂದೆ ನಗೋರ್ ಬಿರಿಯಾನಿ ಆಫರ್ ಮಾಡಿದಂತಾಗಿದೆ ಎಂದು ಇಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಹರಿಬಿಡಲಾಗಿತ್ತು. ಇದರಿಂದ ಮನಸ್ಸಿಗೆ ತುಂಬಾ ನೋವಾಯಿತು ಎಂದು ವಿಘ್ನೇಶ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ವಿಘ್ನೇಶ್, ತಾವು ಎದರಿಸಿದ ಟ್ರೋಲನ್ನು ಸಹ ಪ್ರಶ್ನಿಸಿದ್ದಾರೆ. “ಮೃಗವು ಸೌಂದರ್ಯದ ಕೈಹಿಡಿಯಬಾರದಾ? ಸೌಂದರ್ಯವು ಮೃಗವನ್ನು ಆರಿಸಿದರೆ ತಪ್ಪೇನು? ಈ ಜೀವನವು ಎಷ್ಟು ಅನಿಶ್ಚಿತವಾಗಿದೆ ಎಂದರೆ ಬಸ್ ಕಂಡಕ್ಟರ್ ಸೂಪರ್ಸ್ಟಾರ್ ಆಗಬಹುದು (ರಜನಿಕಾಂತ್). ಜೀವನದಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ತಲುಪುವುದು ಅಷ್ಟು ಸುಲಭವಾಗಿ ಬರುವುದಿಲ್ಲ ಎನ್ನುವ ಮೂಲಕ ಟ್ರೋಲ್ ಮಾಡಿದವರಿಗೆ ವಿಘ್ನೇಶ್ ತಿರುಗೇಟು ನೀಡಿದರು.
ಕೆಲವರು ವಿಘ್ನೇಶ್ ಅವರನ್ನು ನಾಯಿಗೆ ಹೋಲಿಸಿದ್ದನ್ನು ನೆನೆದು ನಯನತಾರಾ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಈ ಬಗ್ಗೆ ಮಾತನಾಡಿರುವ ನಯನತಾರಾ, ಬಹುಶಃ ನಾನು ವಿಕ್ಕಿ (ವಿಘ್ನೇಶ್) ಜೀವನದಲ್ಲಿ ಬರದೇ ಇದ್ದಿದ್ದರೆ ಆತ ನೆಮ್ಮದಿಯಿಂದ ಇರುತ್ತಿದ್ದನು. ಕೆಲವೊಮ್ಮೆ ನನಗೂ ತಪ್ಪಿತಸ್ಥಳೆಂಬ ಭಾವನೆ ಕಾಡುತ್ತದೆ ಎಂದು ನಯನತಾರಾ ಹೇಳಿದ್ದಾರೆ. ಆದರೆ, ನಯನತಾರಾ ಮಾತನ್ನು ವಿಘ್ನೇಶ್ ತಳ್ಳಿಹಾಕಿದ್ದು, ನನ್ನ ಜೀವನದಲ್ಲಿ ನಯನತಾರಾ ಬಂದಿದ್ದೇ ನನಗೆ ದೊರೆತ ದೊಡ್ಡ ಆಶೀರ್ವಾದ ಎಂದಿದ್ದಾರೆ. ಹೀಗೆ ಸಾಕ್ಷ್ಯಚಿತ್ರದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಇಬ್ಬರು ಮಾತನಾಡಿದ್ದಾರೆ.
ಅಂದಹಾಗೆ ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದಾರೆ. ಈ ವಿವಾದ ತೀವ್ರಸ್ವರೂಪದ ಪಡೆದಿದೆ. ಈ ನಡುವೆಯೇ ನಯನತಾರಾ ಸೋಮವಾರ (ನ.18) 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ‘ಬಿಯಾಂಡ್ ದ ಫೈರಿಟೇಲ್’ ರಿಲೀಸ್ ಆಗಿದೆ. ಹೊಸ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಘೋಷಣೆಯಾಗಿದೆ. ಚಿತ್ರದ ಹೆಸರು ‘ರಕ್ಕಾಯಿ’.
ರಕ್ಕಾಗಿ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸೆಂಥಿಲ್ ನಲ್ಲಸ್ವಾಮಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಹಳ್ಳಿ ಲುಕ್‌ನಲ್ಲಿ ಕೈಯಲ್ಲಿ ಕೊಡಲಿ ಹಿಡಿದು ರೆಬೆಲ್ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದು, ‘ನ್ಯಾಯವೇ ಇಲ್ಲದ ನಾಡಿನಲ್ಲಿ ಒಬ್ಬ ತಾಯಿ ವಾಸಿಸುತ್ತಿದ್ದಳು. ಅವಳ ಪ್ರಪಂಚವೇ ತನ್ನ ಮಗುವಾಗಿತ್ತು. ಆದರೆ, ಮಗುವಿನ ಜೀವಕ್ಕೆ ಬೆದರಿಕೆ ಬಂದಾಗ, ಆಕೆ ಓಡುವುದಿಲ್ಲ. ಬದಲಾಗಿ ಯುದ್ಧ ಘೋಷಿಸುತ್ತಾಳೆ’ ಎಂದು ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ‘ರಕ್ಕಾಯಿ’ ಜತೆಗೆ ‘ಮಣ್ಣನ್‌ಗಟ್ಟಿ 1960’, ‘ತನಿ ಒರುವನ್-2’, ‘ಡಿಯರ್ ಸ್ಟೂಡೆಂಟ್ಸ್’ ಚಿತ್ರಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. (ಏಜೆನ್ಸೀಸ್)