ಸಿನಿವಾಣಿ

ಬಿಗ್​ಬಾಸ್​ ಸೀಸನ್​ 12ರ ನಿರೂಪಕರಾಗಿ ದರ್ಶನ್​ ಫಿಕ್ಸ್​? ಹರಿದಾಡುತ್ತಿದೆ ಹೀಗೊಂದು ಸುದ್ದಿ, ಇದು ನಿಜಾನಾ? Actor Darshan

Actor Darshan : ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ 11ನೇ ಸೀಸನ್​ ನಡೆಯುತ್ತಿದೆ. ಅಷ್ಟೂ ಸೀಸನ್​ಗಳ ನಿರೂಪಣೆ ಜವಾಬ್ದಾರಿಯನ್ನು ನಟ ಸುದೀಪ್​ ಹೊತ್ತುಕೊಂಡಿದ್ದರು. ಆದರೆ, ಇದೇ ನನ್ನ ಕೊನೆಯ ಬಿಗ್​ಬಾಸ್​ ನಿರೂಪಣೆ ಎಂದು ನಟ ಸುದೀಪ್​ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಮುಂದಿನ ಸೀಸನ್​ ಅಂದರೆ, ಬಿಗ್​ಬಾಸ್ ಸೀಸನ್​ 12 ಅನ್ನು ಯಾರು ನಡೆಸಿಕೊಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ನಟ ದರ್ಶನ್​ ನಡೆಸಿಕೊಡಲಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟಕ್ಕೂ ಇದು ನಿಜನಾ? ಈ ಕುರಿತಾದ ಅಸಲಿ ಮಾಹಿತಿ ಇಲ್ಲಿದೆ ನೋಡಿ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್​, ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದರ್ಶನ್​ ಬಿಡುಗಡೆಗೆ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದರ್ಶನ್​ ಬಿಡುಗಡೆಯಾಗಲಿದ್ದಾರೆ ಎಂಬ ಭಾರಿ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಇದರ ನಡುವೆ ಜೈಲಿನಿಂದ ಹೊರಬಂದ ಬಳಿಕ ಮುಂದಿನ ಬಿಗ್​ಬಾಸ್​ ಸೀಸನ್​ನನ್ನು ದರ್ಶನ್​ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುದೀಪ್​ ಏನು ಹೇಳಿದ್ದರು?

ಸೀಸನ್​ 11ರ ಗ್ರಾಂಡ್​ ಓಪನಿಂಗ್​ ಎಪಿಸೋಡ್ 9.9 ಟಿಆರ್​ಪಿಯೊಂದಿಗೆ​ ಹಿಂದಿನ ಎಲ್ಲ ದಾಖಲೆಗಳನ್ನು​ ಮುರಿದಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದ ಕಿಚ್ಚ, ಬಿಗ್​ಬಾಸ್​ ಸೀಸನ್​ 11ರ ಮೇಲೆ ನೀವು ತೋರಿದ ಸ್ಪಂದನೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ನೀವು ತೋರಿದ ಪ್ರೀತಿ ಮತ್ತು ಗೌರವ ಎಂಥದ್ದು ಎಂಬುದನ್ನು ಟಿಆರ್​ಪಿ ನಂಬರ್​ ಹೇಳುತ್ತಿದೆ. ಸುಮಾರು 11 ವರ್ಷಗಳ ಕಾಲ ಒಟ್ಟಿಗೆ ನಡೆದಿದ್ದೇನೆ. ಇನ್ನು ಮುಂದೆ ನಾನು ಮಾಡಬೇಕಾಗಿರುವುದನ್ನು ಮಾಡುವ ಸಮಯ ಬಂದಿದೆ. ಬಿಗ್​ಬಾಸ್​ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ಈ ನಿರ್ಧಾರವನ್ನು ಕಲರ್ಸ್​ ಕನ್ನಡ ಮತ್ತು ಈ ಎಲ್ಲ ವರ್ಷಗಳಿಂದ ಬಿಗ್​ಬಾಸ್​ ಶೋ ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಸಾಧ್ಯವಾದಷ್ಟು ನಿಮ್ಮೆಲ್ಲರನ್ನು ರಂಜಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಪ್ಪುಗೆ ಸದಾ ಹೀಗೆ ಇರಲಿ ಎಂದು ಕಿಚ್ಚ ಬರೆದುಕೊಂಡಿದ್ದರು.

ಕಿಚ್ಚ ಸುದೀಪ್ ಅವರ ಈ ಔಪಚಾರಿಕ ಘೋಷಣೆಯು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಬಿಗ್​ಬಾಸ್​ ಸೀಸನ್​ 11 ಪ್ರಾರಂಭವಾಗುವ ಮೊದಲೇ ಸುದೀಪ್​ ಈ ಬಾರಿ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿ ಜೋರಾಗಿ ಹರಡಿತ್ತು. ಅಲ್ಲದೆ, ರಿಷಬ್ ಶೆಟ್ಟಿ ಮತ್ತು ಇತರ ಕೆಲವರನ್ನು ಚಾನಲ್ ಪರಿಗಣಿಸುತ್ತಿದೆ ಎಂಬ ಬಲವಾದ ಮಾತುಗಳು ಕೇಳಿಬಂದಿತ್ತು. ಇದೀಗ ಸ್ವತಃ ಬಿಗ್​ಬಾಸ್​ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿರುವುದರಿಂದ ಮುಂದಿನ ಬಾರಿ ಯಾರು ನಿರೂಪಣೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದರ ನಡುವೆ ದರ್ಶನ್​ ಹೆಸರು ಕೇಳಿಬರುತ್ತಿದೆ.

ದರ್ಶನ್​ ಅವರು ಬಿಗ್​ಬಾಸ್​ ಶೋ ಹೋಸ್ಟ್​ ಮಾಡೋದು ಬಹುತೇಕ ಕನ್ಫರ್ಮ್​? ಬಿಗ್​ಬಾಸ್​ ಸೀಸನ್​ 12ರ ನಿರೂಪಕರಾಗಿ ನಟ ದರ್ಶನ್​ ಫಿಕ್ಸ್​? ಈಗಾಗಲೇ ದರ್ಶನ್​ ಜತೆ ಕಲರ್ಸ್​ ಕನ್ನಡ ಮಾತುಕತೆ ನಡೆಸಿದೆ. ಈ ಕಾರಣಕ್ಕೆ ಸುದೀಪ್​ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಫ್ರೀಡಂ ಟಿವಿಗೆ ಬಿಗ್​ಬಾಸ್​ ಕನ್ನಡದ ಉನ್ನತ ಮೂಲಗಳು ಮಾಹಿತಿ ಖಚಿತಪಡಿಸಿದೆ ಎಂದು ಫ್ರೀಡಂ ಟಿವಿ ವರದಿ ಮಾಡಿದೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಜಯನಗರ ಲೆಜೆಂಡ್ಸ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅ.15ರಂದು ವಿಡಿಯೋ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೆ 1 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 30 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ಲೈಕ್​ ಮಾಡಿದ್ದಾರೆ.

ಆದರೆ, ನಿಜ ಹೇಳಬೇಕೆಂದರೆ, ಚಾನೆಲ್ ಅಂತಹ ಯಾವುದೇ ಘೋಷಣೆಯನ್ನೇ ಮಾಡಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳು ನಕಲಿಯಾಗಿದೆ. ಮುಂದಿನ ಸೀಸನ್​ ಯಾರು ನಡೆಸಲಿದ್ದಾರೆ ಎಂಬ ಚರ್ಚೆಯನ್ನು ಚಾನೆಲ್​ ಸಹ ಮಾಡಿಲ್ಲ. ಸದ್ಯ ಸೀಸನ್​ 11ರ ಕಡೆ ಗಮನವಿದ್ದು, ಮುಂದಿನ ದಿನಗಳಲ್ಲಿ ಈ ಚರ್ಚೆ ಆರಂಭವಾಗಲಿದೆ. ಆದರೆ, ದರ್ಶನ್​ ನಿರೂಪಣೆ ಮಾಡುತ್ತಾರೆ ಅನ್ನೋದು ಸುಳ್ಳು ಸುದ್ದಿ. ಸದ್ಯ ದರ್ಶನ್​ ಜೈಲಿನಲ್ಲಿದ್ದು, ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಜಾಮೀನು ಕುರಿತು ಬೆಂಗಳೂರು ಹೈಕೋರ್ಟ್ ಅಕ್ಟೋಬರ್ 28 ರಂದು ತೀರ್ಪು ನೀಡಲಿದೆ.