ಬೆಂಗಳೂರು: ಆರ್ಜೆ ಶ್ರೀನಿ, ಅದಿತಿ ಪ್ರಭುದೇವ ಅಭಿನಯದ ‘ಓಲ್ಡ್ ಮಾಂಕ್’ ಚಿತ್ರದ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್, ಹಿರಿಯ ನಟ ರಾಜೇಶ್ ಮುಂತಾದವರು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿರುವ ಈ ಟೀಸರ್, ಎರಡು ಭಾಷೆಗಳಿಂದ ಸೇರಿ ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನು, ಚಿತ್ರದ ಟೀಸರ್ ನೋಡಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್, ಟೆಸ್ಲಾ ಮೋಟರ್ಸ್ನ ಸಿಇಓ ಎಲನ್ ಮಸ್ಕ್ ಮುಂತಾದವರು ಟೀಸರ್ ನೋಡಿ ಎಂದು ಪ್ರಚಾರ ಮಾಡುವುದರ ಜತೆಗೆ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಗಣ್ಯವ್ಯಕ್ತಿಗಳಿಗೂ, ಚಿತ್ರತಂಡಕ್ಕೂ ಎಲ್ಲಿಯ ಸ್ನೇಹ-ಸಂಬಂಧ ಎಂಬ ಪ್ರಶ್ನೆ ಸಹಜ. ಚಿತ್ರದ ಟೀಸರ್ನ್ನು ವಿಭಿನ್ನವಾಗಿ ಮತ್ತು ಮಜವಾಗಿ ರೂಪಿಸಿರುವ ನಟ-ನಿರ್ದೇಶಕ ಶ್ರೀನಿ, ಈ ಬಾರಿಯೂ ಅದನ್ನು ಮುಂದುವರೆಸಿದ್ದಾರೆ. ಈ ಮೂವರು ಗಣ್ಯವ್ಯಕ್ತಿಗಳು ಮಾತನಾಡುವ ಹಳೆಯ ಸಂದರ್ಶನದ ತುಣುಕುಗಳನ್ನು ತೆಗೆದುಕೊಂಡು, ಅದಕ್ಕೆ ಹಿನ್ನೆಲೆ ಧ್ವನಿ ಮಿಕ್ಸ್ ಮಾಡಿ, ಅವರೇ ‘ಓಲ್ಡ್ ಮಾಂಕ್’ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ. ಟೀಸರ್ ಜತೆಗೆ, ಈ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದಿದೆ.