ಈ ವರ್ಷದ ಪ್ರತಿಷ್ಠಿತ ಕಾನ್ ಚಿತ್ರೋತ್ಸವ ಅಧಿಕೃತವಾಗಿ ಪ್ರಾರಂಭವಾಗಿದೆ. ಭಾರತದಿಂದ ಹಲವು ನಟ-ನಟಿಯರು ಈ ಚಿತ್ರೋತ್ಸವದಲ್ಲಿ ಉದ್ಘಾಟನಾ ಸಮಾರಂಭದ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೀಪಿಕಾ ಪಡುಕೋಣೆ, ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದರು. ಈ ವರ್ಷವೂ ಅದು ಮುಂದುವರೆದಿದು, ಖ್ಯಾತ ಡಿಸೈನರ್ ಸವ್ಯಸಾಚಿ ಮುಖರ್ಜಿ ಡಿಸೈನ್ ಮಾಡಿದ್ದ ರೆಟ್ರೋ ಸೀರೆಯಲ್ಲಿ ದೀಪಿಕಾ ಕಂಗೊಳಿಸಿದ್ದಾರೆ.
ಬರೀ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿರುವುದಷ್ಟೇ ಅಲ್ಲ, ಈ ಬಾರಿ ಸ್ಪರ್ಧಾತ್ಮಕ ವಿಭಾಗದ ತೀರ್ಪಗಾರರ ಪಟ್ಟಿಯಲ್ಲೂ ದೀಪಿಕಾ ಇದ್ದಾರೆ. ದೀಪಿಕಾ ಅಲ್ಲದೆ ಈ ಸಮಾರಂಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ನಟರಾದ ಕಮಲ್ ಹಾಸನ್, ನವಾಜು ದ್ದೀನ್ ಸಿದ್ದಿಕಿ ಮತ್ತು ಆರ್. ಮಾಧವನ್, ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ರಿಕ್ಕಿ ಕೇಜ್, ನಿರ್ದೇಶಕ ಶೇಖರ್ ಕಪೂರ್, ನಟಿ ತಮನ್ನಾ ಭಾಟಿಯಾ, ವಾಣಿ ತ್ರಿಪಾಠಿ, ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಷಿ ಸೇರಿದಂತೆ ಭಾರತದಿಂದ ಹಲವರು ಭಾಗವಹಿಸಿದ್ದರು.
ಭಾರತ ಮತ್ತು ಫ್ರಾನ್ಸ್ ನಡುವೆ ರಾಜತಾಂತ್ರಿಕ ಒಪ್ಪಂದವಾಗಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದ ಮಾರ್ಶ್ ದು ಫಿಲಂ ವಿಭಾಗದಡಿ ‘ಕಂಟ್ರಿ ಆಫ್ ಹಾನರ್’ ಎಂಬ ಹೆಸರಿನಡಿ ಭಾರತದ ಹಲವು ಚಿತ್ರಗಳು ಪ್ರದರ್ಶನವಾಗಲಿವೆ.