ಕಂಗನಾ ರಣಾವತ್ ತಮ್ಮ ಚಿತ್ರಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ಬಾಲಿವುಡ್ನ ಅತ್ಯಂತ ವಿವಾದಾತ್ಮಕ ನಟಿ ಎಂಬ ಕುಖ್ಯಾತಿಗೆ ಪಾತ್ರರಾದವರು. ಅಷ್ಟೆಲ್ಲ ನಡೆಯುವಾಗ, ಯಾವತ್ತಾದರೂ ಆತ್ಮಹತ್ಯೆ ಯೋಚನೆ ಸುಳಿದಿತ್ತಾ? ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಇತ್ತೀಚೆಗೆ ಮಾತನಾಡಿರುವ ಅವರು, ಆತ್ಮಹತ್ಯೆಯಲ್ಲದಿದ್ದರೂ ಎಲ್ಲರಿಂದ ದೂರ ಹೋಗುವ ಯೋಚನೆ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾಲ್ಕು ವರ್ಷಗಳ ಹಿಂದೆ ಆಗ ನಂಬರ್ ಒನ್ ಸ್ಥಾನದಲ್ಲಿದ್ದೆ. 19 ಬ್ರಾಂಡ್ಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಅದರಿಂದ ಬಂದ ಹಣವನ್ನು ಸಾಕಷ್ಟು ಹೂಡಿಕೆ ಮಾಡಿದ್ದೆ. ಹೀಗಿರುವಾಗ, ಅದೊಂದು ದಿನ ನನ್ನ ಎಕ್ಸ್ ಬಾಯ್ಫ್ರೆಂಡ್ ನನ್ನ ಮೇಲೆ ಕೇಸು ಹಾಕಿದರು. ಅದೊಂದು ಚಿಲ್ಲರೆ ಕೇಸು. ಆದರೂ ಸಾಕಷ್ಟು ಸಮಸ್ಯೆಯಾಯಿತು. ಅದರಿಂದಾಗಿ ಎಲ್ಲ ಬ್ರಾಂಡ್ಗಳ ಒಪ್ಪಂದದಿಂದ ಹಿಂದೆ ಸರಿಯಬೇಕಾಯಿತು. ಆ ಹಣ ನಂಬಿ, ಹೂಡಿಕೆ ಮಾಡಿದ್ದರಿಂದ ದೊಡ್ಡ ಸಮಸ್ಯೆಗೆ ಗುರಿಯಾದೆ’ ಎಂದು ಹೇಳಿಕೊಂಡಿದ್ದಾರೆ ಕಂಗನಾ.
ಬರೀ ಹಣಕಾಸಿನ ಸಮಸ್ಯೆಯಷ್ಟೇ ಅಲ್ಲ, ತಮ್ಮ ವಿರುದ್ಧ ಸಾಕಷ್ಟು ಆರೋಪಗಳನ್ನೂ ಈ ಸಂದರ್ಭದಲ್ಲಿ ಮಾಡಲಾಯಿತು ಎಂದಿರುವ ಅವರು, ‘ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದರು. ಮ್ಯಾನ್-ಈಟರ್, ನಿಂಫೋಮ್ಯಾನಿಯಾಕ್ ಅಂತೆಲ್ಲ ಬಿರುದುಗಳನ್ನು ಕೊಟ್ಟರು. ಅಲ್ಲಿಯವರೆಗೂ ನನ್ನನ್ನು ಮದುವೆಯಾಗುವುದಕ್ಕೆ ಕೆಲವರು ಆಸೆಪಟ್ಟಿದ್ದರು. ಆ ನಂತರ ಮದುವೆಯೆಂಬ ಆಯ್ಕೆಯೇ ನನ್ನ ಜೀವನದಲ್ಲಿರಲಿಲ್ಲ. ಆ ಸಂದರ್ಭದಲ್ಲೇ ನನಗೆ, ಎಲ್ಲರಿಂದ ದೂರ ಓಡಿ ಹೋಗುವ ಯೋಚನೆ ಬಂದಿದ್ದು. ಹಳ್ಳಿಯಲ್ಲಿ ನೆಮ್ಮದಿಯಾಗಿ ಕೃಷಿ ಮಾಡಿಕೊಂಡಿರುವ ಆಸೆಯಾಗಿದ್ದು. ಆದರೆ, ಕ್ರಮೇಣ ಇದೆಲ್ಲವನ್ನೂ ಮೆಟ್ಟಿ ನಿಂತೆ’ ಎಂದು ನೆನಪಿಸಿಕೊಂಡಿದ್ದಾರೆ. -ಏಜೆನ್ಸೀಸ್