ಸಿನಿವಾಣಿ

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನಾ: ಕೋವಾ ಫಿಯೋನಿಕ್ಸ್ ಡೋಲನ್ ಪರಿಚಯಿಸಿದ ಗೋವಾ ಬ್ಯೂಟಿ

ಮುಂಬೈ: ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ನಟಿ ಇಲಿಯಾನಾ ಡಿ ಕ್ರೂಸ್ ಶನಿವಾರ ಖಚಿತಪಡಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಮಗವಿನ ಫೋಟೋ ಶೇರ್​ ಮಾಡಿಕೊಂಡಿರುವ ಇಲಿಯಾನಾ, ಆಗಸ್ಟ್​ 1ರಂದು ಜನನವಾಯಿತು ಎಂದು ಬರೆದುಕೊಂಡಿದ್ದಾರೆ.

ಮಗುವಿನ ಹೆಸರನ್ನೂ ಸಹ ಬಹಿರಂಗಪಡಿಸಿದ್ದಾರೆ. ಕೋವಾ ಫಿಯೋನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ. ನಮ್ಮ ಪ್ರೀತಿಯ ಹುಡುಗನನ್ನು ಜಗತ್ತಿಗೆ ಸ್ವಾಗತಿಸಲು ನಾವು ಎಷ್ಟು ಸಂತೋಷಪಡುತ್ತಿದ್ದೇವೆ ಎಂಬುದನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಹೃದಯ ತುಂಬಿಹೋಗಿದೆ ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ.

ಮಗನ ಫೋಟೋ ಶೇರ್​ ಮಾಡಿಕೊಂಡಿರುವ ಇಲಿಯಾನಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಇಲಿಯಾನಾಗೆ ಶುಭಕೋರಿದ್ದಾರೆ.

ಇಲಿಯಾನಾ ಅವರು ಏಪ್ರಿಲ್​ 18ರಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಗುವಿನ ಉಡುಗೆಯ ಫೋಟೋ ಹಾಗೂ ಅಮ್ಮ (Mama) ಎಂದು ಬರೆದಿರುವ ಲಾಕೆಟ್​ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ನನ್ನ ಪುಟ್ಟ ಡಾರ್ಲಿಂಗ್​ ಅನ್ನು ಭೇಟಿಯಾಗಲು ಕಾಯಲು ಆಗುತ್ತಿಲ್ಲ ಎಂದು ಫೋಟೋಗೆ ಶೀರ್ಷಿಕೆ ಸಹ ಬರೆದುಕೊಂಡಿದ್ದರು.

ನಿಗೂಢವಾಗೇ ಉಳಿದ ಮಗುವಿನ ತಂದೆ

ಮಗು ಜನಿಸಿದರೂ ಮಗುವಿನ ತಂದೆಯ ಗುರುತು ಮಾತ್ರ ನಿಗೂಢವಾಗಿಯೇ ಉಳಿದಿದೆ. ಕೆಲ ದಿನಗಳ ಹಿಂದೆ ಹುಡುಗನ ಜತೆಗಿನ ಆಪ್ತ ಫೋಟೋವನ್ನು ಇಲಿಯಾನಾ ಶೇರ್ ಮಾಡಿದ್ದರು. ಆದರೆ ಈ ಫೋಟೋ ಅಸ್ಪಷ್ಟವಾಗಿರುವುದರಿಂದ ಅದರಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗಿಲ್ಲ. ಇದಾದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹುಡುಗನೊಂದಿಗೆ ತೆಗೆದ ಸೆಲ್ಫಿ ಫೋಟೋ ಹಂಚಿಕೊಂಡಿದ್ದರು. ಮೂರು ಫೋಟೋಗಳನ್ನು ಶೇರ್ ಮಾಡುವಾಗ ಡೇಟ್ ನೈಟ್ ಎಂದು ಬರೆದು ಲವ್ ಸಿಂಬಲ್ ಹಾಕಿದ್ದರು. ಇಲಿಯಾನಾ ಅವರ ಬಾಯ್ ಫ್ರೆಂಡ್ ಆಗಿದ್ದು, ಆಕೆಯ ಗರ್ಭಕ್ಕೆ ಅವರೇ ಕಾರಣ ಎಂದು ಹಲವು ನೆಟಿಜನ್ ಗಳು ಕಮೆಂಟ್ ಮಾಡಿದ್ದರು. ಆದರೆ, ಇಲಿಯಾನಾ ಮಾತ್ರ ಎಲ್ಲಿಯೂ ಬಾಯ್​ಫ್ರೆಂಡ್​ ಬಗ್ಗೆ ಮಾಹಿತಿ ನೀಡಿಲ್ಲ ಮತ್ತು ಖಚಿತ ಪಡಿಸಿಲ್ಲ. ಹೀಗಾಗಿ ಮಗುವಿನ ತಂದೆಯ ಗುರುತು ಇನ್ನೂ ನಿಗೂಢವಾಗಿಯೇ ಉಳಿದಿದೆ.

2019ರಲ್ಲೇ ಮುರಿದ ಸಂಬಂಧ

ಈ ಹಿಂದೆ ಆಸ್ಟ್ರೇಲಿಯಾ ಫೋಟೋಗ್ರಾಫರ್​ ಆ್ಯಂಡ್ರಿವ್​ ನೀಬೋನ್​ ಎಂಬುವರ ಜೊತೆ ಇಲಿಯಾನಾ ಸಂಬಂಧದಲ್ಲಿದ್ದರು. ಇಬ್ಬರು 2019ರಲ್ಲಿ ಬೇರೆಯಾಗಿದ್ದಾರೆ. ಅಂದಿನಿಂದ ಇಲಿಯಾನಾ ಏಕಾಂಗಿಯಾಗಿದ್ದಾರೆ. ಆದರೆ, ಇದೀಗ ದಿಢೀರನೇ ತಾಯಿಯಾಗುತ್ತಿರುವ ಸಂಗತಿಯನ್ನು ತಿಳಿಸಿದ ಕೂಡಲೇ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಸಿನಿಮಾ ಹಿನ್ನೆಲೆ

ಅಂದಹಾಗೆ ಇಲಿಯಾನಾ ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದಾರೆ. ತೆಲುಗು ಭಾಷೆಯ ದೇವದಾಸ್ ಚಿತ್ರದ ಮೂಲಕ ನಟಿ ಚಿತ್ರರಂಗ ಪ್ರವೇಶಿಸಿದರು. ಪೋಕಿರಿ (2006), ಮುನ್ನಾ (2007), ಜಲ್ಸಾ (2008) ಮತ್ತು ಜುಲಾಯಿ (2012) ನಂತಹ ಸೂಪರ್​ ಹಿಟ್ ಚಿತ್ರಗಳೊಂದಿಗೆ ಇಲಿಯಾನಾ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಮುಂಚಿದರು. ಕೇಡಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಿಜಯ್ ಸಿನಿಮಾ ನನ್ಬನ್​ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅನುರಾಗ್ ಬಸು ನಿರ್ದೇಶನದ ಸೂಪರ್ ಹಿಟ್ ಚಿತ್ರ ಬರ್ಫಿಯೊಂದಿಗೆ ಇಲಿಯಾನಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. (ಏಜೆನ್ಸೀಸ್​)