Actress Priyamani : ಯಾವುದೇ ನಟ ಅಥವಾ ನಟಿಯಾಗಿರಲಿ ತಮ್ಮದೇಯಾದ ಕನಸಿನ ಪಾತ್ರಗಳನ್ನು ಮಾಡುವ ಆಸೆಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಆ ಪಾತ್ರಕ್ಕೆ ಬಣ್ಣ ಹಚ್ಚಬೇಕೆಂಬ ಬಯಕೆ ಇರುತ್ತದೆ. ಇದಿಷ್ಟೇ ಅಲ್ಲದೆ, ಕೆಲ ಕಲಾವಿದರಿಗೆ ತಮ್ಮ ಕನಸಿನ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಬಯಕೆಯನ್ನು ಹೊಂದಿರುತ್ತಾರೆ. ನೆಚ್ಚಿನ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ ಅದು ಸಣ್ಣ ಪಾತ್ರವಾಗಿದ್ದರೂ ಸಹ ಅದನ್ನು ಮಾಡಲು ಸಿದ್ಧರಿರುತ್ತಾರೆ. ಎಲ್ಲವನ್ನೂ ಬಿಟ್ಟು ಅವರ ಚಿತ್ರಕ್ಕಾಗಿ ಕಾಯಲು ಕೂಡ ರೆಡಿಯಾಗಿರುತ್ತಾರೆ. ಅಂತಹ ಕಲಾವಿದರಲ್ಲಿ ಪ್ರಿಯಾಮಣಿ ಕೂಡ ಒಬ್ಬರು. ಅಷ್ಟಕ್ಕೂ ಪ್ರಿಯಾಮಣಿ ಅವರ ನೆಚ್ಚಿನ ನಿರ್ದೇಶಕ ಯಾರು ಗೊತ್ತಾ? ಅವರೇ ಹೇಳಿದ್ದಾರೆ ಓದಿ.
ದಕ್ಷಿಣ ಭಾರತದ ಪ್ರಸಿದ್ಧ ಸಿನಿಮಾ ನಿರ್ದೇಶಕರ ಬಗ್ಗೆ ಮಾತನಾಡುವಾಗ ಅಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಖಂಡಿತ ಸ್ಥಾನ ಇದ್ದೇ ಇರುತ್ತದೆ. ದಕ್ಷಿಣ ಭಾರತ ಸಿನಿಮಾರಂಗದ ದಿಕ್ಕನ್ನೇ ಬದಲಾಯಿಸಿದ ಕೆಲವೇ ಕೆಲವು ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ಗೀತಾಂಜಲಿ, ನಾಯಕ್, ಅಂಜಲಿ, ರೋಜಾ, ಬಾಂಬೆ, ಸಖಿ ಅವರು ನಿರ್ದೇಶಿಸಿದ ಮಾಸ್ಟರ್ ಕ್ಲಾಸಿಕ್ ಸಿನಿಮಾಗಳು. ಅವರೊಂದಿಗೆ ಒಂದೇ ಒಂದು ಸಿನಿಮಾ ಮಾಡಿದರೆ ಸಾಕು ಎಂದು ಭಾವಿಸುವ ಅನೇಕ ನಾಯಕರು ಮತ್ತು ನಾಯಕಿಯರು ಇದ್ದಾರೆ.
ಮಣಿರತ್ನಂ ಅವರು ವಿಶೇಷವಾಗಿ ನಾಯಕಿಯರಿಗೆ ನೆಚ್ಚಿನ ನಿರ್ದೇಶಕ. ಅವರು ನಾಯಕಿಯರನ್ನು ಪರದೆಯ ಮೇಲೆ ಬಹಳ ಸುಂದರವಾಗಿ ಮತ್ತು ವಿಭಿನ್ನವಾಗಿ ತೋರಿಸುತ್ತಾರೆ. ಮಣಿರತ್ನಂ ಚಿತ್ರದಲ್ಲಿ ಅವಕಾಶ ಬಂದರೆ, ಯಾವುದೇ ನಾಯಕಿಯಾದರೂ ಅದನ್ನು ಕೈಚೆಲ್ಲುವುದಿಲ್ಲ. ತಾವು ಈಗಾಗಲೇ ಒಪ್ಪಿದ ಸಿನಿಮಾಗಳನ್ನು ಸಹ ಬದಿಗಿಟ್ಟು ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಾರೆ.
ಬಹುಭಾಷ ನಟಿ ಪ್ರಿಯಾಮಣಿ ಅವರಿಗೂ ಮಣಿರತ್ನಂ ಅಂದರೆ ತುಂಬಾ ಇಷ್ಟ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಣಿರತ್ನಂ ಬಗ್ಗೆ ಮಾತನಾಡಿರುವ ಪ್ರಿಯಾಮಣಿ, ಮಣಿ ಸರ್ ಅವರಿಂದ ನನಗೆ ಕರೆ ಬಂದರೆ ಸಾಕು ಚಿತ್ರದಲ್ಲಿ ನಟಿಸಲು ನಾನು ನನ್ನ ಕೈ ಕತ್ತರಿಸಿಕೊಳ್ಳಲೂ ಸಿದ್ಧ ಎಂದಿದ್ದಾರೆ. ಅವರ ಚಿತ್ರದಲ್ಲಿ ನಟಿಸುವುದೇ ಒಂದು ದೊಡ್ಡ ಅದೃಷ್ಟ. ಅವರು ಮಾಡಿರುವ ಸಿನಿಮಾಗಳು ಮತ್ತು ಅವರ ಅನುಭವವನ್ನು ನೋಡಿದಾಗ, ಅವರ ಚಿತ್ರದಲ್ಲಿ ನಟಿಸುವ ಆಸೆ ನನಗೆ ಉಂಟಾಗುತ್ತದೆ. ಅದು ಯಾವ ರೀತಿಯ ಪಾತ್ರವಾಗಿದ್ದರೂ ಪರವಾಗಿಲ್ಲ ಎಂದು ಪ್ರಿಯಾಮಣಿ ಹೇಳಿದರು. ಪ್ರಿಯಾಮಣಿ ಅವರು ಈ ಹಿಂದೆ ಮಣಿರತ್ನಂ ಅವರ ರಾವಣ್ ಚಿತ್ರದಲ್ಲಿ ನಟಿಸಿದ್ದರು.
ಪ್ರಿಯಾಮಣಿ ವಿಚಾರಕ್ಕೆ ಬರುವುದಾದರೆ, ದಕ್ಷಿಣ ಭಾರತದಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಾಯಕಿಯಾಗಿದ್ದ ಪ್ರಿಯಾಮಣಿ, ಮದುವೆಯ ನಂತರ ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡರು. ಕೆಲವು ವರ್ಷಗಳ ನಂತರ, ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಸಿನಿಮಾ ಜೊತೆಗೆ, ಅವರು ಅನೇಕ ಟಿವಿ ಕಾರ್ಯಕ್ರಮಗಳು ಮತ್ತು ವೆಬ್ ಸರಣಿಗಳನ್ನು ಮಾಡುವ ಮೂಲಕ ಬೆಳ್ಳಿತೆರೆ ಮತ್ತು ದೂರದರ್ಶನದಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಮಧ್ಯೆ, ಅವರು ಶಾರುಖ್ ಖಾನ್ ನಟಿಸಿದ ಬಾಲಿವುಡ್ ಚಿತ್ರ ಜವಾನ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪ್ರಿಯಾಮಣಿ ಪ್ರಸ್ತುತ ಹಿಂದಿಯಲ್ಲಿ 'ಫ್ಯಾಮಿಲಿ ಮ್ಯಾನ್ 3' ಎಂಬ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ಸರಣಿಯು ಈಗಾಗಲೇ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮೂರನೇ ಸೀಸನ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರಲ್ಲಿ ಮನೋಜ್ ಬಾಜಪೇಯಿ ನಾಯಕನಾಗಿ ನಟಿಸುತ್ತಿದ್ದರೆ, ಪ್ರಿಯಾಮಣಿ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)