ಸಿನಿವಾಣಿ

ನಾನು ಆತ್ಮಹತ್ಯೆ ಮಾಡಿಕೊಂಡರೆ ಬೇರೆ ತರಹ ಬಿಂಬಿಸಲಾಗುತ್ತದೆ ... ಪಾಯಲ್​ ಆರೋಪ

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದ ನಟಿ ಪಾಯಲ್​ ಘೋಶ್​, ತಾನು ನೇಣು ಹಾಕಿಕೊಂಡರೆ, ಅದನ್ನು ಬೇರೆ ತರಹ ಬಿಂಬಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಪಾಯಲ್​ ಘೋಶ್​ ಹಾಗೆ ಆರೋಪಿಸುವುದಕ್ಕೂ ಕಾರಣವಿದೆ. ಇತ್ತೀಚೆಗೆ, ಅನುರಾಗ್​ ಕಶ್ಯಪ್​ ಮತ್ತು ಪಾಯಲ್​ ಘೋಶ್​ ನಡುವಿನ ಸಮರದ ಕುರಿತಾಗಿ ಸಂದರ್ಶನ ನಡೆಸಲಾಯಿತಂತೆ. ಆದರೆ, ಆ ಸಂದರ್ಶನ ಇನ್ನೂ ಪ್ರಕಟವಾಗದಿರುವುದಕ್ಕೆ ಕಾರಣ, ಅನುರಾಗ್​ ಅವರಿಂದ ಅನುಮತಿ ಸಿಕ್ಕಿಲ್ಲ ಎಂಬುದು ಕ್ರಮೇಣ ಪಾಯಲ್​ಗೆ ಗೊತ್ತಾಯಿತಂತೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಬರೆದುಕೊಂಡಿರುವ ಪಾಯಲ್​, 'ನಾಳೆ ನಾನು ನೇಣು ಬಿಗಿದುಕೊಂಡು ಸತ್ತರೆ, ಅದು ಆತ್ಮಹತ್ಯೆ ಎನ್ನುವುದಕ್ಕಿಂತ ನಾನು ಡಿಪ್ರೆಶನ್​ನಿಂದ ಹೀಗೆ ಮಾಡಿಕೊಂಡೆ ಎಂದು ಸುದ್ದಿಯಾಗುತ್ತದೆ. ಅದನ್ನು ಬೇರೆ ತರಹ ಬಿಂಬಿಸಲಾಗುತ್ತದೆ' ಎಂದು ಪಾಯಲ್​ ಹೇಳಿಕೊಂಡಿದ್ದಾರೆ.

ತನ್ನನ್ನು ಅನುರಾಗ್​ ಕಶ್ಯಪ್​ 2013ರಲ್ಲಿ ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​, ಅನುರಾಗ್​ ವಿರುದ್ಧ ಇತ್ತೀಚೆಗೆ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್​​ ಆಕ್ಟ್​ನಡಿ ಅನುರಾಗ್​ ಕಶ್ಯಪ್​ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದು, ಈ ಕುರಿತು ಅನುರಾಗ್​ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.