ಸಿನಿವಾಣಿ

ಆಗ ನನಗೆ ಕೇವಲ 17 ವರ್ಷ, ನಿರ್ದೇಶಕರು ಹೇಳಿದ್ದನ್ನು ನಾನು ಮಾಡಿದೆ... ಅಮಲಾ ಪೌಲ್​ ಅಚ್ಚರಿ ಹೇಳಿಕೆ! Amala Paul

Amala Paul : ಸಿನಿಮಾ ರಂಗದಲ್ಲಿ ಕೆಲವೇ ನಾಯಕಿಯರು ತಮ್ಮ ಸೌಂದರ್ಯದ ಜೊತೆಗೆ ಸಿನಿ ವಿಮರ್ಶಕರ ಮೆಚ್ಚುಗೆಯನ್ನು ಗಳಿಸುವ ಸಾಧನೆ ಮಾಡಿದ್ದಾರೆ. ಅಮಲಾ ಪೌಲ್ ಅಂತಹ ಯಶಸ್ವಿ ನಾಯಕಿಯರಲ್ಲಿ ಒಬ್ಬರು. ತಮಿಳು, ಕನ್ನಡ ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಬಹುಭಾಷಾ ನಟಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ತಮ್ಮ ಸೌಂದರ್ಯ ಮತ್ತು ನಟನೆಗೆ ಸಮಾನ ಪ್ರಶಂಸೆಯನ್ನು ಪಡೆದಿರುವ ಅಮಲಾ ಪೌಲ್​, ನಿರ್ಮಾಪಕಿಯೂ ಹೌದು.

ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಅಮಲಾ ಪೌಲ್, ಸಿನಿ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದಾರೆ. ನಟಿಯಾಗಿ 15 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಸಿನಿಮಾ ರಂಗದಲ್ಲಿ ಕೇವಲ ಯಶಸ್ಸನ್ನು ಮಾತ್ರವಲ್ಲದೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾಗಿ ಅಮಲಾ ಬಹಿರಂಗಪಡಿಸಿದ್ದಾರೆ.

2010ರಲ್ಲಿ ಬಿಡುಗಡೆಯಾದ ಅಮಲಾ ಪಾಲ್ ಅವರ ತಮಿಳು ಚಿತ್ರ "ಸಿಂಧು ಸಮವೇಲಿ" ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಮೇಲೆ ಪ್ರಮುಖ ಪರಿಣಾಮ ಬೀರಿತು. ಅವರು ಸಿಂಧು ಸಮವೇಲಿಯಲ್ಲಿ ದಿಟ್ಟ ಪಾತ್ರವನ್ನು ನಿರ್ವಹಿಸಿದರು. ಅನೇಕರನ್ನು ಮುಜುಗರಕ್ಕೀಡುಮಾಡುವ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿದರು. ಆ ಒಂದು ಪ್ರಯತ್ನವೂ ಅವರ ವೈಯಕ್ತಿಕ ಜೀವನ ಮತ್ತು ಆರಂಭಿಕ ವೃತ್ತಿಜೀವನದಲ್ಲಿ ಹಿನ್ನಡೆಯನ್ನುಂಟುಮಾಡಿತು.

ತನ್ನ ಮಾವನ ಜೊತೆ ಅಕ್ರಮ ಸಂಬಂಧ ಹೊಂದಿರುವ ಸೊಸೆಯ ಪಾತ್ರವನ್ನು ಸಿಂಧು ಸಮವೇಲಿ ಚಿತ್ರದಲ್ಲಿ ಅಮಲಾ ನಿರ್ವಹಿಸಿದರು. ಈ ಚಿತ್ರ ಬಿಡುಗಡೆಯಾದ ನಂತರ ಭಾರಿ ವಿವಾದಕ್ಕೆ ಕಾರಣವಾಯಿತು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿವಾದದ ಬಗ್ಗೆ ಮಾತನಾಡಿದ ಅವರು, ಆ ಚಿತ್ರವನ್ನು ನೋಡಿದ ನಂತರ ಅವರ ತಂದೆ ತೀವ್ರವಾಗಿ ಅಸಮಾಧಾನಗೊಂಡಿದ್ದರಿಂದ ಚಿತ್ರದ ಸುತ್ತಲಿನ ನೆಗೆಟಿವಿಟಿ ನನ್ನನ್ನು ತುಂಬಾ ಹೆದರಿಸಿತ್ತು ಎಂದು ಬಹಿರಂಗಪಡಿಸಿದರು.

ತನ್ನ ಪಾತ್ರದ ಸಾಮಾಜಿಕ ಪರಿಣಾಮವನ್ನು ಆ ಸಮಯದಲ್ಲಿ ನನ್ನಿಂದ ಊಹಿಸಲು ಸಾಧ್ಯವಾಗಲಿಲ್ಲ. ಚಿತ್ರ ಬಿಡುಗಡೆಯಾದ ನಂತರವೇ ನಾವು ಅಂತಹ ಪಾತ್ರವನ್ನು ಮಾಡಬಾರದು, ಅದು ಕೆಟ್ಟದು ಅಥವಾ ನಮ್ಮ ಸಮಾಜವು ಒಪ್ಪಿಕೊಳ್ಳುವ ವಿಷಯವಲ್ಲ ಎಂದು ನನಗೆ ಅರಿವಾಯಿತು. ಆದರೆ, ಆ ಸಮಯದಲ್ಲಿ ಕೇವಲ 17 ಅಥವಾ 18 ವರ್ಷ ವಯಸ್ಸಿನ ನಟಿಯಾಗಿದ್ದರಿಂದ, ನಿರ್ದೇಶಕರ ಸೂಚನೆಗಳನ್ನು ಕುರುಡಾಗಿ ಪಾಲಿಸುತ್ತಿದ್ದೆ. ಈ ವಿವಾದವು ನನ್ನ ಮೇಲೆ ಭಾವನಾತ್ಮಕ ಪರಿಣಾಮ ಬೀರಿದ್ದಲ್ಲದೆ, ವೃತ್ತಿಜೀವನದ ದೃಷ್ಟಿಯಿಂದಲೂ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಯಿತು ಎಂದು ಅಮಲಾ ಹೇಳಿಕೊಂಡಿದ್ದಾರೆ.

ಸಿಂಧು ಸಮವೇಲಿ ನಂತರ, ಅವಳ ಮುಂದಿನ ಚಿತ್ರ ಮೈನಾ ಚಿತ್ರದ ಆರಂಭಿಕ ಪ್ರಚಾರಗಳಿಗೆ ಅಮಲಾ ಪೌಲ್​ ಅವರನ್ನ ಕರೆಯಲಿಲ್ಲ. ಇದಾದ ನಂತರ ಸಾಕಷ್ಟು ಆಫರ್​ಗಳು ಬಂದವು. ಅನೇಕ ಸಿನಿಮಾಗಳು ಹಿಟ್​ ಆದ್ದರಿಂದ ಯಶಸ್ವಿ ನಟಿಯರ ಸಾಲಿಗೆ ಅಮಲಾ ಪೌಲ್ ಸೇರಿಕೊಂಡರು. ಅವರ ಯಶಸ್ಸಿನ ನಂತರ ವಿವಾದಾತ್ಮಕ ಚಿತ್ರ ಸಿಂಧು ಸಮವೇಲಿಯನ್ನು ಮರು ಬಿಡುಗಡೆ ಮಾಡಲಾಯಿತು. ಆಗಲೂ, ವಿವಾದ ಸೃಷ್ಟಿಸಿತು ಎಂದು ಅಮಲಾ ಪೌಲ್​ ಹೇಳಿದ್ದಾರೆ. (ಏಜೆನ್ಸೀಸ್​)