Naga Chaitanya : ತಾರಾ ದಂಪತಿಯಾದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುತ್ತಾರೆ. ಅವರ ಅಭಿಮಾನಿಗಳು ಪ್ರತಿ ಸಂದರ್ಶನ ಮತ್ತು ಅದರ ವಿಡಿಯೋ ತುಣುಕನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಶೋಭಿತಾ ಅವರ ಬಗ್ಗೆ ನಾಗ ಚೈತನ್ಯ ಹೇಳಿದ ಮಾತುಗಳು ವೈರಲ್ ಆಗುತ್ತಿವೆ.
ಜಗಪತಿ ಬಾಬು ಅವರು ನಡೆಸಿಕೊಡುವ ಜಯಮ್ಮು ನಿಶ್ಚಯಮ್ಮು ರಾ ಟಾಕ್ ಶೋನಲ್ಲಿ, ತಮ್ಮ ಹೆಂಡತಿ ಶೋಭಿತಾರನ್ನು ತಾವು ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನು ನಾಗ ಚೈತನ್ಯ ಬಹಿರಂಗಪಡಿಸಿದ್ದರು.
ಜೀವನದಲ್ಲಿ ಯಾವುದನ್ನು ಬಿಟ್ಟು ಇರಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ನಾಗ ಚೈತನ್ಯ, ನನ್ನ ಹೆಂಡತಿ ಶೋಭಿತಾ ಎಂದು ಹೇಳಿದರು. ಅವಳಿಲ್ಲದೆ ನನ್ನಿಂದ ಬದುಕಲು ಸಾಧ್ಯವಿಲ್ಲ ಎಂದರು. ಇದೇ ವೇಳೆ ಥಂಡೆಲ್ ಸಿನಿಮಾದ ನಂತರ ಶೋಭಿತಾ ತಮ್ಮೊಂದಿಗೆ ಜಗಳವಾಡಿದ್ದರ ಬಗ್ಗೆಯೂ ನಾಗ ಚೈತನ್ಯ ಮಾತನಾಡಿದರು.
ಅಂದಹಾಗೆ, ಥಂಡೆಲ್ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಯಶಸ್ಸು ಗಳಿಸಿತು. ಈ ಸಿನಿಮಾವನ್ನು ಚಂದು ಮಾಂಟೆಟಿ ನಿರ್ದೇಶಿಸಿದರು. ಈ ಚಿತ್ರದ ಹಾಡೊಂದರಲ್ಲಿ ಬಳಸಿರುವ ಅಡ್ಡಹೆಸರು ಶೋಭಿತಾ ಅವರ ಕೋಪಕ್ಕೆ ಕಾರಣವಾಗಿತ್ತು ಎಂದು ನಾಗಚೈತನ್ಯ ಹೇಳಿದ್ದಾರೆ.
ಅಂದಹಾಗೆ, ಚೈತನ್ಯ ಅವರು ಶೋಭಿತಾರನ್ನು ಪ್ರೀತಿಯಿಂದ "ಬುಜ್ಜಿ" (ಪ್ರೀತಿಯ ಮಾತು, ಬೇಬಿ ಎಂದರ್ಥ) ಎಂದು ಕರೆಯುತ್ತಾನೆ. ಥಂಡೆಲ್ ಸಿನಿಮಾದ ಈ ಹಾಡಿನಲ್ಲಿ "ಬುಜ್ಜಿ ಥಲಿ" (ಬೇಬಿ ಮಹಿಳೆ/ಅಮ್ಮ) ಎಂಬ ಮಾತು ಬಂದಿದ್ದು. ಶೋಭಿತಾ ಇದನ್ನು ಕೇಳಿ, ಚೈತನ್ಯ ನಿರ್ದೇಶಕರಿಗೆ ಸ್ಪೆಷಲ್ ಆಗಿ ಹೇಳಿ ಇಟ್ಟಿದ್ದಾನೆ ಎಂದು ತಪ್ಪಾಗಿ ಭಾವಿಸಿ ಕೋಪಗೊಂಡಿದ್ದರಂತೆ. ಅಲ್ಲದೆ, ಕೆಲ ದಿನಗಳು ಮಾತನಾಡಲೇ ಇಲ್ಲ ಮುನಿಸಿಕೊಂಡಿದ್ದಳು ಎಂದು ಚೈತನ್ಯ ಹೇಳಿದ್ದಾರೆ.
ನಾನು ಯಾವುದೇ ರೀಕ್ವೆಸ್ಟ್ ಮಾಡಿರಲಿಲ್ಲ, ಇದು ಸ್ಕ್ರಿಪ್ಟ್‌ನ ಭಾಗವಷ್ಟೇ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಶೋಭಿತಾ ಸುಮ್ಮನಾದರು ಎಂದು ಜಗಪತಿ ಬಾಬು ಅವರ ಟಾಕ್ ಶೋದಲ್ಲಿ ಚೈತನ್ಯ ಅವರು ನಗುತ್ತಾ ಹಂಚಿಕೊಂಡಿದ್ದಾರೆ. ಪ್ರೀತಿ ಇರುವಲ್ಲಿ ಸಂಘರ್ಷವಿರುತ್ತದೆ. ಸಂಘರ್ಷವಿಲ್ಲದಿದ್ದರೆ ಯಾವುದೇ ಸಂಬಂಧವು ನಿಜವಲ್ಲ ಎಂದು ಇದೇ ಸಂದರ್ಭದಲ್ಲಿ ನಾಗ ಚೈತನ್ಯ ಹೇಳಿದರು.
ಇನ್ನು ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಇನ್ಸ್ಟಾಗ್ರಾಂ ಮೂಲಕ ಭೇಟಿಯಾದರು. ಸಾಮಾಜಿಕ ಜಾಲತಾಣದ ಮೂಲಕ ನನ್ನ ಸಂಗಾತಿ ಸಿಗುತ್ತಾರೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಶೋಭಿತಾ ಅವರ ಪೋಸ್ಟ್ಗಳನ್ನು ನೋಡಿದ್ದೇನೆ. ನನ್ನ ಒಂದು ಪೋಸ್ಟ್‌ಗೆ ಶೋಭಿತಾ ಕಾಮೆಂಟ್ ಮಾಡಿದ ನಂತರ ನಾವು ಚಾಟ್ ಮಾಡಲು ಪ್ರಾರಂಭಿಸಿದೆವು. ನಂತರ ನಾವು ವೈಯಕ್ತಿಕವಾಗಿ ಭೇಟಿಯಾದೆವು. ನಾವು ಸ್ನೇಹಿತರಾದೆವು. ನಂತರ ನಾವು ಪ್ರೀತಿಯಲ್ಲಿ ಬಿದ್ದೆವು ಎಂದು ನಾಗ ಚೈತನ್ಯ ಅದೇ ಶೋನಲ್ಲಿ ಹೇಳಿದರು. (ಏಜೆನ್ಸೀಸ್)