ಹೈದರಾಬಾದ್: ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್ ಬೆಡಗಿ ರೆಜಿನಾ ಕ್ಯಾಸ್ಸಂದ್ರ ( Regina Cassandra ) ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.
ರೆಜಿನಾ ಅವರು ತೆಲುಗು, ತಮಿಳು ಮಾತ್ರವಲ್ಲದೆ, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಸರು ಪಡೆದುಕೊಂಡಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ, ಅನೇಕ ಸಿನಿಮಾಗಳಲ್ಲಿ ಐಟಂ ಸಾಂಗ್ಗಳಲ್ಲಿ ಸೊಂಟ ಬಳಕಿಸುವ ಮೂಲಕ ತಾನೊಬ್ಬ ಒಳ್ಳೆಯ ಡಾನ್ಸರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ. ತಾವು ಬಯಸಿದ ಪ್ರಮಾಣದಲ್ಲಿ ಯಶಸ್ಸನ್ನು ಪಡೆಯದಿದ್ದರು ಸಹ ರೆಜಿನಾ ಅವರಿಗೆ ಅಭಿಮಾನಿ ಬಳಗವಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ರೆಜಿನಾ, ಒಮ್ಮೆ ನಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದೆ ಎಂದಿದ್ದಾರೆ. ಅದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಹಿಂದೆ, ಮಧ್ಯರಾತ್ರಿಯ ಸಮಯದಲ್ಲಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದೆ. ಈ ವೇಳೆ ನನಗೆ ಲಸ್ಸಿ ಕುಡಿಯಬೇಕೆಂಬ ಬಯಕೆಯಾಯಿತು. ಅದೇ ಸಮಯದಲ್ಲಿ ಮುಚ್ಚುತ್ತಿದ್ದ ಅಂಗಡಿಗೆ ಹೋಗಿ ಲಸ್ಸಿ ಕೇಳಿದೆ. ಆದರೆ, ಟೈಂ ಆಗಿದ್ದರಿಂದ ಅಂಗಡಿಯ ಮಾಲೀಕ ಕೋಪದಿಂದ ಲಸ್ಸಿ ಇಲ್ಲ, ಏನೂ ಇಲ್ಲ, ಇಲ್ಲಿಂದ ಹೋಗು ಎಂದರು. ಹೇಗಾದರೂ ಮಾಡಿ ಲಸ್ಸಿ ಕುಡಿಯಲೇಬೇಕು ಅಂತ ಒಂದು ಸುಳ್ಳು ಹೇಳಿದೆ. ಅದೇನೆಂದರೆ, ನಾನು ಗರ್ಭಿಣಿ ಎಂದೆ ಮತ್ತು ನನಗೆ ಲಸ್ಸಿ ಕೊಟ್ಟರೆ ದೇವರು ನಿನ್ನನ್ನು ಆಶೀರ್ವದಿಸುತ್ತಾನೆ ಎಂದೆ. ನನ್ನ ಮಾತು ಕೇಳಿ ಸ್ನೇಹಿತರು ಒಂದು ಕ್ಷಣ ಆಘಾತಕ್ಕೆ ಒಳಗಾದರು ಎಂದು ಇತ್ತೀಚಿನ ಸಂದರ್ಶನದಲ್ಲಿ ರೆಜಿನಾ ಹೇಳಿಕೊಂಡಿದ್ದಾರೆ.
ನಾನು ಗರ್ಭಿಣಿ ಎಂಬ ವಿಚಾರವನ್ನು ಆ ಅಂಗಡಿಯ ಮಾಲಿಕ ಎಲ್ಲರಿಗೂ ಹೇಳಿಬಿಡುತ್ತಾನೆ ಎಂಬ ಭಯವಿತ್ತು. ಅದೃಷ್ಟವಶಾತ್, ಆತ ಯಾರಿಗೂ ಹೇಳಲಿಲ್ಲ. ನಾನು ಇಂತಹ ಅನೇಕ ಕುಚೇಷ್ಟೆಗಳನ್ನು ಮಾಡಿದ್ದೇನೆ ಮತ್ತು ಇನ್ನೂ ಮಾಡುತ್ತೇನೆ ಎಂದು ರಜಿನಾ ಹೇಳಿದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ರೆಜಿನಾ ಅವರು ಫ್ಲಾಶ್ಬ್ಯಾಕ್, ಮುಕುತಿ ಅಮ್ಮನ್, ದಿ ವೈವ್ಸ್ ಹಾಗೂ ಸೆಕ್ಷನ್ 108 ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)