ಸಿನಿವಾಣಿ

ಗಂಡ, ಹೆಂಡತಿ ಮತ್ತು ಕರೊನಾ; ಸಿನಿಮಾ ವಿಮರ್ಶೆ

Webdesk - Ravikanth
  • ಚಿತ್ರ: ಮೇಡ್ ಇನ್ ಚೈನಾ
  • ನಿರ್ದೇಶನ: ಪ್ರೀತಂ ತೆಗ್ಗಿನಮನೆ
  • ನಿರ್ಮಾಣ: ಟಿ.ಆರ್. ಚಂದ್ರಶೇಖರ್
  • ತಾರಾಗಣ: ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್, ರವಿ ಭಟ್, ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ಅದು ತ್ರೇತಾ ಯುಗ. ಕಾಡಿನಲ್ಲಿ ರಾಮ, ಅಶೋಕವನದಲ್ಲಿ ಸೀತೆ, ಅವರ ಮಧ್ಯೆ ರಾವಣ. ಇದು ಕಲಿಯುಗ. ವುಹಾನ್​ನಲ್ಲಿ ಅಭಿರಾಮ, ಬೆಂಗಳೂರಿನಲ್ಲಿ ಮೈಥಿಲಿ, ಅವರ ಮಧ್ಯೆ ಕರೊನಾ ... ಹೀಗೊಂದು ಹರಿಕಥೆಯೊಂದಿಗೆ ಶುರುವಾಗುತ್ತದೆ ‘ಮೇಡ್ ಇನ್ ಚೈನಾ’. ಕೆಲಸದ ಮೇಲೆ ಗಂಡ ಚೈನಾಗೆ ಹೋಗಿರುತ್ತಾನೆ. ಅವನ ಬರುವಿಕೆಗಾಗಿ ಗರ್ಭಿಣಿ ಹೆಂಡತಿ ಕಾಯುತ್ತಿರುತ್ತಾಳೆ. ಆದರೆ, ಅಲ್ಲಿ ಕರೊನಾ ಹೆಚ್ಚಾಗಿ, ಇವನ ಮನೆ ಸೀಲ್​ಡೌನ್ ಆಗಿ, ಬರುವುದು ತಡವಾಗುತ್ತದೆ. ಈ ಅವಧಿಯಲ್ಲಿ ಅವರಿಬ್ಬರೂ ಏನೆಲ್ಲ ಅನುಭವಿಸುತ್ತಾರೆ ಎಂದು ಹೇಳುವ ಕಥೆಯೇ ‘ಮೇಡ್ ಇನ್ ಚೈನಾ’.

ಕಥೆ ಕೇಳುವುದಕ್ಕೆ ಬಹಳ ಸರಳವಾಗಿದ್ದರೂ, ಇದು ಸರಳ ಚಿತ್ರವೇನಲ್ಲ. ಏಕೆಂದರೆ, ‘ಮೇಡ್ ಇನ್ ಚೈನಾ’ ಕನ್ನಡದ ಮೊದಲ ವರ್ಚ್ಯುಯಲ್ ಚಿತ್ರ. ತಾಂತ್ರಿಕವಾಗಿ ಕ್ಲಿಷ್ಟವಾದ ಚಿತ್ರ. ಇಡೀ ಚಿತ್ರ ವಿಡಿಯೋ ಕಾಲ್ ಮೂಲಕವೇ, ಅಂದರೆ ಫೋನ್ ಅಥವಾ ಕ್ಯಾಮೆರಾ ಮಾನಿಟರ್​ಗಳ ಮೂಲಕವೇ ಸಾಗುತ್ತದೆ. ಹಾಗಾಗಿ, ಇಲ್ಲಿ ಅದ್ಧೂರಿ ದೃಶ್ಯವೈಭವ ಕಾಣಸಿಗುವುದಿಲ್ಲ. ಲೊಕೇಶನ್​ಗಳೂ ಸೀಮಿತ. ಪಾತ್ರಧಾರಿಗಳೂ ಸೀಮಿತ. ಆದರೂ ಕಷ್ಟ. ಏಕೆಂದರೆ, ಇಲ್ಲಿ ಹಲವು ಪದರಗಳಿವೆ. ಮಾತಿನ ಮಧ್ಯೆ, ಯೂಟ್ಯೂಬ್​ನಲ್ಲೊಂದು ವಿಡಿಯೋ ಕಾಣಿಸುತ್ತದೆ. ವಾಟ್ಸಾಪ್ ಸಂದೇಶ ರವಾನೆಯಾಗುತ್ತದೆ. ಗೂಗಲ್ ಸರ್ಚ್​ನಲ್ಲಿ

ಇನ್ನೇನೋ ಹುಡುಕಲಾಗುತ್ತಿರುತ್ತದೆ. ಆ ಸಂದರ್ಭದಲ್ಲಿ, ಅದ್ಯಾಕೆ ಎಂದನಿಸಬಹುದು. ಆದರೆ, ಈ ಮೂಲಕ ಕಥೆ ಮುಂದುವರೆಸಲಾಗುತ್ತಿರುತ್ತದೆ ಅಥವಾ ಯಾವುದೋ ಮಹತ್ವದ ವಿಷಯವನ್ನು ಹೇಳಲಾಗುತ್ತಿರುತ್ತದೆ. ಹಾಗಾಗಿ, ಇಂತಹ ಚಿತ್ರಗಳನ್ನು ನೋಡುವಾಗ ತಾಳ್ಮೆ ಇರಬೇಕು.

ಮೊದಲೇ ಹೇಳಿದಂತೆ ಇಲ್ಲಿ ದೃಶ್ಯವೈಭವ ಇಲ್ಲ, ಹಾಡುಗಳಿಲ್ಲ, ಹೊಡೆದಾಟವೂ ಇಲ್ಲ. ಇಡೀ ಚಿತ್ರ ಮಾತು ಮತ್ತು ಭಾವನೆಗಳ ಮೇಲೆ ನಿಂತಿದೆ. ಆ ನಿಟ್ಟಿನಲ್ಲಿ ಪ್ರೀತಂ ಮೊದಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ. ಇಂಥದ್ದೊಂದು ಚಿತ್ರದ ಪರಿಕಲ್ಪನೆಯಷ್ಟೇ ಅಲ್ಲ, ಕಲಾವಿದರಿಂದ ನೈಜ ಅಭಿನಯ ತೆಗೆಸುವುದು ಸುಲಭದ ಮಾತಲ್ಲ. ಈ ವಿಷಯದಲ್ಲಿ ಕಲಾವಿದರು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.