ಬೆಂಗಳೂರು: ನಿನ್ನೆ ತೆರೆ ಕಂಡಿರುವ ಯುವರತ್ನ ಸಿನಿಮಾ ಭರ್ಜರಿಯಾಗಿ ಓಡುತ್ತಿದೆ. ಅಪ್ಪು ಅಭಿಮಾನಿಗಳಿಗಂತೂ 'ಯುವರತ್ನ' ರಸದೌತಣ ಬಡಿಸಿದೆ.
ಇನ್ನು ಗಳಿಕೆ ವಿಷಯಕ್ಕೆ ಬರುವುದಾದರೆ ಯುವರತ್ನ ಅಪ್ಪು ಅವರ ಈ ಹಿಂದಿನ ಸಿನಿಮಾದ ಎಲ್ಲ ದಾಖಲೆಗಳನ್ನು ಮುರಿದಿದೆ. ಮೂಲಗಳ ಪ್ರಕಾರ ಯುವರತ್ನ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಸನ್ 7 ರಿಂದ 10 ಕೋಟಿ ಎನ್ನಲಾಗಿದೆ.
ಕೋವಿಡ್ ಲಾಕ್ಡೌನ್ ನಂತರ ಸಿನಿಮಾ ಮಂದಿರಗಳಲ್ಲಿ ತೆರೆ ಕಂಡ ಕನ್ನಡದ ಮೂರನೇ ಪ್ರಮುಖ ಚಿತ್ರ ಯುವರತ್ನ. ಇನ್ನು ಪೊಗರು ಸಿನಿಮಾ 8.7 ಕೋಟಿ ರೂಪಾಯಿಯನ್ನು ಮೊದಲ ದಿನ ಗಳಿಸಿತ್ತು. ರಾಬರ್ಟ್ ಮೊದಲ ದಿನವೇ 14 ಕೋಟಿ ರೂ ಬಾಚಿತ್ತು.
ಪ್ರೇಕ್ಷಕರಿಂದ ಹಾಗೂ ಸಿನಿ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಯುವರತ್ನಕ್ಕೆ ಸಂಕಷ್ಟ ಎದುರಾಗಿದೆ. ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ಕೊಡಲಾಗಿದೆ. ಇದರಿಂದ ಯುವರತ್ನ ಗಳಿಕೆ ಮೇಲೆ ನೇರ ಪರಿಣಾಮ ಉಂಟಾಗಲಿದೆ.