ಬೆಂಗಳೂರು: ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಕನ್ನಡದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಮನೆ ಮಾಡಿರುವ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ನಿನ್ನೆ (ಜುಲೈ 11) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಅಕ್ಷರಗಳಿಗೆ ಭಾವ ತುಂಬುತ್ತಿದ್ದ ಅಪರ್ಣಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
ಅಪರ್ಣಾ ಸಾವಿನ ಬೆನ್ನಲ್ಲೇ ಅವರ ಕೊನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಗಾಯಕಿಯರಾದ ಸುನಿತಾ ಮತ್ತು ಛಾಯಾ ಅವರು ಅಪರ್ಣಾಗೆ ಹಾಡುಗಳನ್ನು ಹಾಡಿದ್ದಾರೆ. ಅದಕ್ಕೂ ಮುನ್ನು ಅಪರ್ಣಾ ಅವರು ಹೇಗಿದೆ ನನ್ನ ಹೊಸ ಹೇರ್ಸ್ಟೈಲ್ ಎಂದು ಕೇಳುತ್ತಾರೆ. ಸಾವಿನ ದಿನಗಳ ಹತ್ತಿರವಾಗುತ್ತಿವೆ ಎಂಬುದು ಗೊತ್ತಿದ್ದರು ಅದನ್ನು ತೋರಿಸಿಕೊಳ್ಳದೇ ಕೊನೆಯ ದಿನಗಳಲ್ಲೂ ಅಪರ್ಣಾ ಎಲ್ಲರಿಗೂ ನಗು ಹಂಚಿದ್ದಾರೆ.
ಇನ್ನು ಅಪರ್ಣಾ ಅವರು ಕಳೆದ ಎರಡು ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್ ಖಾಯಿಲೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಆಕೆಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಪಾಸಣೆಯಲ್ಲಿ ಪತ್ತೆಯಾಯ್ತು. ಅಪರ್ಣಾ ಇನ್ನು ಆರು ತಿಂಗಳು ಉಳಿದಿದ್ರೆ ಹೆಚ್ಚು ಅಂತ ವೈದ್ಯರು ಹೇಳಿದ್ದರು. ಆದರೆ, ಆಕೆ ಛಲಗಾತಿ ಒಂದೂವರೆ ವರ್ಷ ಹೋರಾಟ ನಡೆಸಿದಳು ಎಂದು ಹೇಳುತ್ತಾ ನಾಗರಾಜ್ ಭಾವುಕರಾದರು.
ಕ್ಯಾನ್ಸರ್ ರೋಗವಿರುವುದು ಗೊತ್ತಾದ ಬಳಿಕವು ಆಕೆಯ ಬದುಕುವ ಛಲ ಕುಗ್ಗಲಿಲ್ಲ. ಏನಾದರೂ ಮಾಡಿ ಗೆಲ್ತೀನಿ ಎಂಬುದೇ ಮನದಲ್ಲಿ ದೃಢವಾಗಿತ್ತು. ಅದಾದ ನಂತರವು ಒಂದೂವರೆ ವರ್ಷ ಅಂದರೆ ಜನವರಿಯ ತನಕ ಹೋರಾಡಿದಳು. ಆದರೆ, ಫೆಬ್ರವರಿಯಲ್ಲಿ ಸೋಲಲು ಪ್ರಾರಂಭಿಸಿದಳು. ಇದು ದೇಹವೇ ದೇಹವನ್ನು ಬಾಧಿಸುವ ಒಂದು ವ್ಯಾದಿ. ಇಷ್ಟು ವರ್ಷ ಕ್ಯಾನ್ಸರ್ ವಿರುದ್ಧ ನಿರಂತರ ಹೋರಾಟ ನಡೆಸಿದಳು. ಆದ್ರೆ, ಇಂದು ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೇವೆ. ಇದೇ ಅಕ್ಟೋಬರ್‌ಗೆ ಆಕೆಗೆ 58 ವರ್ಷ ತುಂಬುತ್ತಿತ್ತು ಎಂದು ಪತಿ ನಾಗರಾಜ್ ವಸ್ತಾರೆ ಭಾವುಕರಾಗಿ ಮಾತನಾಡಿದ್ದಾರೆ.
ಅಂದಹಾಗೆ ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ, ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದದರು. ಕಿರುತೆರೆಯನ್ನು ಬೆಳೆಸಿದರು.
ಅಪರ್ಣಾ ಅವರು ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟಿವಿ’ಯೇತರ ಶೋಗಳನ್ನು ನಿರ್ವಹಿಸಿದ್ದಾರೆ. 2004ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ ಮೂಲಕ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡರು. ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲೂ ನಟಿಸಿದರು.
ಅಪರ್ಣ ಅವರು ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ಈವರೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಪರ್ಣಾ ಅವರು 2005ರಲ್ಲಿ ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.