ಬೆಂಗಳೂರು: ಹಾಲಿವುಡ್ ‘ಜೋಕರ್’ ಇದೀಗ ‘ಕಾಕ್ಟೇಲ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದಾನೆ. ಈ ಹಿಂದೆ ‘ಯುವರತ್ನ’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜತೆ ತೆರೆ ಹಂಚಿಕೊಂಡಿದ್ದ ವಿರೇನ್ ಕೇಶವ್, ‘ಕಾಕ್ಟೇಲ್’ ನಾಯಕ. ‘ನಿರ್ದೇಶಕರು ನನ್ನ ಪಾತ್ರಕ್ಕೆ ನಾಲ್ಕೈದು ಶೇಡ್ ನೀಡಿದ್ದಾರೆ. ಚಿತ್ರ ಯಾವ ಜಾನರ್ ಅಂತನೂ ಹೇಳಲಾಗುವುದಿಲ್ಲ. ಪ್ರತಿಯೊಂದು ಸೀನ್ ಹೊಸತನದಿಂದ ಕೂಡಿದೆ. ಟ್ವಿಸ್ಟ್ ಗಳಿವೆ’ ಎಂದು ಮಾಹಿತಿ ನೀಡುತ್ತಾರೆ ವಿರೇನ್.
‘ಜೋಕರ್ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡ ರೀತಿಯೇ ವಿಭಿನ್ನವಾಗಿತ್ತು. ಒಬ್ಬೊಬ್ಬನೇ ಹೋಟೆಲ್ಗೆ, ಥಿಯೇಟರ್ಗೆ ಹೋಗಬೇಕು, ಪುಸ್ತಕ ಓದಬೇಕು, ಸಿನಿಮಾ ನೋಡಬೇಕು. ಒಂಟಿತನದ ಅನುಭವ ಮಾಡಿಕೊಳ್ಳಬೇಕಿತ್ತು. ಜತೆಗೆ ಕ್ರೌರ್ಯದಲ್ಲಿ ಖುಷಿ ಹುಡುಕುವಂತಹ ಪಾತ್ರ’ ಎಂದು ಸಿದ್ಧತೆ ಕುರಿತು ಹೇಳಿಕೊಳ್ಳುತ್ತಾರೆ. ವಿಶೇಷ ಅಂದರೆ, ಚಿತ್ರದ ಪ್ರಚಾರಕ್ಕೆ ಅವರು ಜೋಕರ್ ವೇಷದಲ್ಲಿಯೇ ಜನರ ಮಧ್ಯೆ ಓಡಾಡಿದ್ದಾರೆ. ‘ಗೊರಗುಂಟೆಪಾಳ್ಯ ಸರ್ಕಲ್ನಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿದೆ. ಯಶವಂತಪುರ ರೈಲ್ವೆ ಸ್ಟೇಷನ್, ಎಚ್ಎಂಟಿ ಮೈದಾನ, ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದೇನೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ವಿರೇನ್.
ಅವರ ಪ್ರಕಾರ, ‘ಕಾಕ್ಟೇಲ್’ ಪ್ರತಿ ಯೂತ್ಗೂ ಕನೆಕ್ಟ್ ಆಗುವ ಚಿತ್ರವಂತೆ. ‘‘ಕಾಕ್ಟೇಲ್’ ಕುಡಿದರೆ ಆರೋಗ್ಯ ಹಾಳಾಗುತ್ತೆ. ಆದರೆ ‘ಕಾಕ್ಟೇಲ್’ ಸಿನಿಮಾ ನೋಡಿದರೆ ಆರೋಗ್ಯ ಹಾಳಾಗಲ್ಲ, ಜತೆಗೆ ಒಳ್ಳೆ ಕಿಕ್ ಕೂಡ ಸಿಗುತ್ತೆ. ಎಲ್ಲೂ ಬೇಜಾರಾಗುವುದಿಲ್ಲ. ಕಂಪ್ಲೀಟ್ ಮನರಂಜನಾತ್ಮಕ ಚಿತ್ರ’ ಎಂದು ಚಿತ್ರದ ಬಗ್ಗೆ ಭರವಸೆಯಿಂದ ಹೇಳಿಕೊಳ್ಳುತ್ತಾರೆ ನಾಯಕ ವಿರೇನ್ ಕೇಶವ್.