ಸಿನಿವಾಣಿ

ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಖಾನ್​ಗಳದ್ದಲ್ಲ: ಈ ಯುವ ನಟನ ಹೆಸರಲ್ಲಿದೆ ಆ ದಾಖಲೆ

ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ದಶಕಗಳಿಂದ ರಾಜತಾಂತ್ರಿಕ ವಿಚಾರವಾಗಿ ದ್ವೇಷವಿದ್ದರೂ ಪಾಕಿಗಳು ಭಾರತದ ಸಿನಿಮಾಗಳನ್ನು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ, ಪಾಕಿಸ್ತಾನದಲ್ಲಿ ಮನರಂಜನೆಯ ಕೊರತೆ ಇದೆ. ಬಹಳ ಹಿಂದಿನಿಂದಲೂ ಭಾರತೀಯ ಸಿನಿ ರಂಗವನ್ನು ಪಾಕಿಗಳು ಅನುಸರಿಸುತ್ತಾ ಬರುತ್ತಿದ್ದಾರೆ. ಪಾಕಿಸ್ತಾನಿಗಳೂ ಭಾರತೀಯ ಚಿತ್ರರಂಗದ ಕಟ್ಟಾ ಅಭಿಮಾನಿಗಳು ಎಂದೇ ಹೇಳಬಹುದು. ಬಾಲಿವುಡ್​ನ ಪ್ರತಿ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತವೆ. ಅದರಲ್ಲೂ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮತ್ತು ಆಮೀರ್​ ಖಾನ್​ ಸಿನಿಮಾಗಳಿಗೆ ತುಂಬಾ ಕ್ರೇಜ್​ ಇದೆ.

ಪಾಕಿಸ್ತಾನದಲ್ಲಿ ಭಾರತದ ಯಾವ ಸಿನಿಮಾ ದಾಖಲೆ ಬರೆದಿದೆ ಎಂಬುದು ನಿಮಗೆ ಗೊತ್ತಿದೆಯೇ? ನೀವು ಖಾನ್​ಗಳ ಸಿನಿಮಾ ಅಂದುಕೊಂಡಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಏಕೆಂದರೆ ಪಾಕ್​ನಲ್ಲಿ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾ ಯಾವುದೆಂದರೆ ಬಾಲಿವುಡ್​ ಸೂಪರ್​ಸ್ಟಾರ್​ ಸಂಜಯ್​ ದತ್ ಜೀವನ ಆಧಾರಿತ ಸಿನಿಮಾ.​ ಈ ಸಿನಿಮಾ ಹೆಸರು ಸಂಜು.

ಸಂಜು ಬಯೋಪಿಕ್​ನಲ್ಲಿ ರಣಬೀರ್​ ಕಪೂರ್​ ಸಂಜಯ್​ ದತ್​ ಪಾತ್ರವನ್ನು ನಿರ್ವಹಿಸಿದರು. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಂಜು 2018ರಲ್ಲಿ ಬಿಡುಗಡೆಯಾಯಿತು. ಬಾಕ್ಸ್​ ಆಫೀಸ್​ ಪ್ರಕಾರ ಸಂಜು ಭಾರತದಲ್ಲಿ 586 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪಾಕಿಸ್ತಾನದಲ್ಲಿ 37.60 ಕೋಟಿ ರೂ. ಗಳಿಸಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರನ್ನು ಮೀರಿಸಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ನಾಯಕ ನಟ ಎಂಬ ದಾಖಲೆಯನ್ನು ರಣಬೀರ್ ಕಪೂರ್ ಹೊಂದಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಪಾಕಿಸ್ತಾನದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. 2016ರಲ್ಲಿ ತೆರೆಕಂಡ ಕುಸ್ತಿ ತಾರೆಯೊಬ್ಬಳ ಜೀವನ ಕಥೆಯ ಸಿನಿಮಾ ಇದಾಗಿದೆ. ಈ ಸಿನಿಮಾ ಪಾಕಿಸ್ತಾನದಲ್ಲಿ 33 ಕೋಟಿ ರೂ. ಗಳಿಕೆ ಮಾಡಿದೆ. ಸುಲ್ತಾನ್​ ಬಳಿಕ ಅಮೀರ್ ಖಾನ್ ಅಭಿನಯದ ಪಿಕೆ ಸಿನಿಮಾ ಮೂರನೇ ಸ್ಥಾನದಲ್ಲಿದೆರ. 2014 ರಲ್ಲಿ ತೆರೆಕಂಡ ರಾಜಕುಮಾರ ಹಿರಾನಿ ನಿರ್ದೇಶನದ ಪಿಕೆ ಸಿನಿಮಾ ಪಾಕಿಸ್ತಾನದಲ್ಲಿ 23.50 ಕೋಟಿ ರೂ. ಗಳಿಸಿತು.

ಸಲ್ಮಾನ್ ಖಾನ್ ಅವರ 2015ರಲ್ಲಿ ತೆರೆಕಂಡ ಬಜರಂಗಿ ಭಾಯಿಜಾನ್ ಸಿನಿಮಾ ಪಾಕಿಸ್ತಾನದಲ್ಲಿ 23.20 ಕೋಟಿಗಳನ್ನು ಮತ್ತು ಶಾರುಖ್ ಖಾನ್-ಕಾಜೋಲ್ ಅವರ ಎವರ್ ಗ್ರೀನ್ ಸೂಪರ್ಹಿಟ್ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ 20 ಕೋಟಿಗಳನ್ನು ಗಳಿಸಿದೆ. (ಏಜೆನ್ಸೀಸ್​)