ಸಿನಿವಾಣಿ

ಪೊಲೀಸರೊಂದಿಗೆ ಖ್ಯಾತ ನಟಿಯ ಕಿರಿಕ್: ವೈರಲ್​ ವಿಡಿಯೋ ಹಿಂದಿನ ಅಸಲಿ ಸಂಗತಿ ಬಯಲು

ಚೆನ್ನೈ: ಕಾಲಿವುಡ್​ ಖ್ಯಾತ ನಟಿ ನಿವೇತಾ ಪೇತುರಾಜ್​ ಕಾರಿನೊಳಗೆ ಕುಳಿತು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ವಿಡಿಯೋ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅನೇಕರು ಈ ವಿಡಿಯೋ ನಿಜವೆಂದು ನಂಬಿ, ನಿವೇತಾ ಏನು ಮಾಡಿದರು? ಯಾಕೆ ಪೊಲೀಸರೊಂದಿಗೆ ಜಗಳವಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.

ನಿವೇತಾ ಅವರ ಕಿರಿಕ್​ ವಿಡಿಯೋ ಎಷ್ಟರಮಟ್ಟಿಗೆ​ ವೈರಲ್​ ಆಗಿತ್ತು ಅಂದರೆ, ಬಿಡುಗಡೆಯಾದ 24 ಗಂಟೆಯಲ್ಲಿ 5ಲಕ್ಷಕ್ಕೂ ಅಧಿಕ ಭಾರಿ ವೀಕ್ಷಣೆ ಕಂಡಿತ್ತು. ಅಷ್ಟಕ್ಕೂ ವೈರಲ್​ ಆಗಿದ್ದ ವಿಡಿಯೋದಲ್ಲಿ ಏನಿತ್ತು ಅನ್ನೋದನ್ನ ನೋಡುವುದಾದರೆ, ನಿವೇತಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಪೊಲೀಸರು ನಿವೇತಾ ಅವರಿಗೆ ಕಾರಿನ ಡಿಕ್ಕಿ ತೆರೆಯುವಂತೆ ಸೂಚಿಸುತ್ತಾರೆ. ಇದಕ್ಕೆ ಆಕ್ಷೇಪಿಸುವ ನಟಿ ಕಾರಿನ ಟ್ರಂಕ್​ ತೆರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ವೇಳೆ ಇದೇ ವಿಚಾರವಾಗಿ ಪೊಲೀಸರು ಹಾಗೂ ನಟಿಯ ನಡುವೆ ದೊಡ್ಡ ವಾಗ್ವಾದವೇ ನಡೆಯುತ್ತದೆ. ಪೊಲೀಸರು ಮತ್ತು ನಿವೇತಾ ಅವರ ನಡುವಿನ ವಾಗ್ವಾದದ ದೃಶ್ಯವನ್ನು ರೆಕಾರ್ಡ್‌ ಮಾಡುತ್ತಿದ್ದ ವ್ಯಕ್ತಿಗೂ ಆ ಸಂದರ್ಭದಲ್ಲಿ ನಟಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದಿಷ್ಟು ದೃಶ್ಯ ವೈರಲ್​ ವಿಡಿಯೋದಲ್ಲಿದೆ.

ಬಹುತೇಕರು ಈ ವಿಡಿಯೋವನ್ನು ನಿಜವೆಂದೇ ನಂಬಿದ್ದರು. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ನಿವೇತಾ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಅಲ್ಲದೆ, ಹೊಸ ಚಿತ್ರದ ಬಗ್ಗೆಯೂ ಅಷ್ಟೊಂದು ಮಾಹಿತಿ ಇರಲಿಲ್ಲ. ಆದರೆ, ಈಗ ವೈರಲ್​ ವಿಡಿಯೋ ಹಿಂದಿನ ಅಸಲಿ ಸಂಗತಿ ಬಯಲಾಗಿದೆ. ವಿಡಿಯೋದಲ್ಲಿ ನಡೆದಿರುವ ಘಟನೆ ನಿಜವಲ್ಲ, ಅದು ಸಿನಿಮಾ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಎಂಬುದು ತಿಳಿದುಬಂದಿದೆ. ವಿಡಿಯೋದಲ್ಲಿ ಪೊಲೀಸರು ಕಾಲಿಗೆ ಕ್ರಾಕ್ಸ್‌ ಧರಿಸಿದ್ದ ಕಾರಣ ನೆಟ್ಟಿಗರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್‌ ಎಂದು ಊಹಿಸಿದ್ದರು. ಅದು ಕೂಡ ನಿಜವಾಗಿದೆ.

ಈ ಹಿಂದೆ ಹಲವಾರು ಕಿರುಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಮಾಡಿರುವ ಪವನ್ ಸಾದಿನೇನಿ ಅವರ ನಿರ್ದೇಶನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಸುಶ್ಮಿತಾ ಕೊನಿದೆಲಾ ಅವರು "ಪರುವು" ಹೆಸರಿನ ವೆಬ್ ಸರಣಿಯನ್ನು ನಿರ್ಮಿಸಿದ್ದಾರೆ. ಈ ವೆಬ್​ ಸರಣಿ ಶೀಘ್ರದಲ್ಲೇ Zee 5 ನಲ್ಲಿ ಸ್ಟ್ರೀಮ್ ಆಗಲಿದೆ. ಈ ಸರಣಿಯಲ್ಲಿ, ನಟ ನರೇಶ್ ಅಗಸ್ತ್ಯ ಮತ್ತು ನಿವೇತಾ ಪೇತುರಾಜ್ ಜೊತೆಯಾಗಿದ್ದಾರೆ. ಈ ವೆಬ್​ ಸರಣಿಯನ್ನು ಪ್ರಚಾರ ಮಾಡುವ ಸಲುವಾಗಿ ಸಿನಿ ತಂಡ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕುಚೇಷ್ಟೆಗಳು ಮತ್ತು ತಪ್ಪುದಾರಿಗೆಳೆಯುವ ವಿಡಿಯೋಗಳನ್ನು ಮಾಡಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಪ್ರಚಾರ ಮಾಡುವು ಒಂದು ಅಭ್ಯಾಸವಾಗಿಬಿಟ್ಟಿದೆ. ಪರುವು ಚಿತ್ರದ ಪೋಸ್ಟರ್‌ನಲ್ಲಿ ಕಾರಿನ ಟ್ರಂಕ್‌ನಲ್ಲಿ ಮೃತದೇಹವನ್ನು ಇರಿಸಿರುವುದನ್ನು ಕಾಣಬಹುದು. ಹೀಗಾಗಿ ಪೊಲೀಸರು ಕೇಳಿದಾಗ ನಿವೇತಾ ಪೇತುರಾಜ್ ಅದನ್ನು ತೆರೆಯಲು ನಿರಾಕರಿಸಿದ್ದಾರೆ. ವೈರಲ್​ ವಿಡಿಯೋ ಅಸಲಿಯತ್ತು ತಿಳಿದ ನಿಸಿ ರಸಿಕರು ಚಿತ್ರತಂಡದ ವಿರುದ್ಧ ಕಿಡಿಕಾರುತ್ತಿದ್ದಾರೆ. (ಏಜೆನ್ಸೀಸ್​)