ಹೈದರಾಬಾದ್: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತು ಇತ್ತೀಚೆಗಷ್ಟೇ ಬಹಿರಂಗವಾಗಿರುವ ಹೇಮಾ ಸಮಿತಿ ವರದಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಯಾವ ರೀತಿ ನಟಿಯರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಮಾ ಸಮಿತಿ ಮುಂದೆ ಹೇಳಿಕೊಂಡಿದ್ದಾರೆ. ಈ ವರದಿ ಬಂದ ಮೇಲೆ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದರ ನಡುವೆ ನಟಿ ಅದಿತಿ ರಾವ್ ಹೈದರಿ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಈ ಹಿಂದೆ ಸಂಡೇ ಗಾರ್ಡಿಯನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಅದಿತಿ ಮಾತನಾಡಿದ್ದರು. ಒಳ್ಳೆಯ ಪಾತ್ರಗಳನ್ನು ಪಡೆಯಲು ಹಾಸಿಗೆ ಹಂಚಿಕೊಳ್ಳುವಂತೆ ನನ್ನನ್ನೂ ಕೇಳಿದ್ದರು. ಆದರೆ, ನಾನು ನಿರಾಕರಿಸಿದಾಗ ಕೆಲವರು ನನ್ನ ವಿರುದ್ಧವೂ ತಿರುಗಿಬಿದ್ದಿದ್ದರು ಎನ್ನುತ್ತಾರೆ ಅದಿತಿ.
ವೈಯಕ್ತಿಕವಾಗಿ ನಾನು ಯಾರ ಹೆಸರುಗಳನ್ನು ಇಲ್ಲಿ ಹೇಳಲು ಬಯಸುವುದಿಲ್ಲ. ಯಾರಾದರೂ ನನ್ನೊಂದಿಗೆ ಹಾಗೆ ಮಾತನಾಡಲು ಎಷ್ಟು ಧೈರ್ಯ? ಹಾಸಿಗೆಯಲ್ಲಿ ಸಹಕರಿಸಲು ಕೇಳಲು ಎಷ್ಟು ಧೈರ್ಯ ಇರಬೇಕು? ನಾನು ಅವರ ಕಾಮತೃಷೆಯನ್ನು ತೀರಿಸದಿದ್ದಕ್ಕೆ ಸುಮಾರು ಎಂಟು ತಿಂಗಳ ಕಾಲ ನನಗೆ ಯಾವುದೇ ಚಿತ್ರಗಳು ಸಿಗಲಿಲ್ಲ. ಆದರೆ, ನನ್ನ ನಿರ್ಧಾರ ಮಾತ್ರ ನನ್ನನ್ನು ಬಲಪಡಿಸಿತು. ಕೆಲವೊಮ್ಮೆ ಇಂತಹ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅದನ್ನು ಜಯಿಸಬೇಕಾಗುತ್ತದೆ ಎಂದು ಅದಿತಿ ಹೇಳಿದ್ದರು.
ಅಂದಹಾಗೆ ಅದಿತಿ ಅವರು ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ನಟಿಸಿ, ರಂಜಿತ್ ನಿರ್ದೇಶಿಸಿದ 2006ರಲ್ಲಿ ತೆರೆಕಂಡ ಪ್ರಜಾಪತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಮಲಯಾಳಂ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಅದಿತಿ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ವೆಬ್ಸರಣಿಯಲ್ಲೂ ನಟಿಸಿದ್ದಾರೆ. ಸದ್ಯ ಅದಿತಿ ಅವರು ನಟ ಸಿದ್ಧಾರ್ಥ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಇಬ್ಬರ ನಿಶ್ಚಿತಾರ್ಥ ನೇರವೇರಿದೆ.
ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್)