ಸಿನಿವಾಣಿ

ಹರ್ನಾಜ್ ಸಂಧು ಗೆದ್ದ ಮಿಸ್ ಯೂನಿವರ್ಸ್ ಕಿರೀಟದ ಬೆಲೆ ಎಷ್ಟು ಗೊತ್ತಾ? ಎಷ್ಟು ವಜ್ರಗಳನ್ನು ಹೊಂದಿದೆ ಗೊತ್ತಾ?

ಭಾರತದ ಹರ್ನಾಜ್ ಸಂಧು 'ಮಿಸ್ ಯೂನಿವರ್ಸ್ 2021'ರ ಕಿರೀಟವನ್ನು ಅಲಂಕರಿಸಿದ್ದಾರೆ. ಸೋಮವಾರದಂದು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಂಜಾಬ್ ಮೂಲದ ಹರ್ನಾಜ್ ಭಾರತವನ್ನು ಪ್ರತಿನಿಧಿಸಿದ್ದರು. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. 21 ವರ್ಷದ ಚಂಡೀಗಢ ಮೂಲದ ಮಾಡೆಲ್ 21 ವರ್ಷಗಳ ನಂತರ ಈ ಕಿರೀಟವನ್ನು ಮನೆಗೆ ತಂದಿದ್ದಾರೆ. ಇಷ್ಟುದಿನ ಬರೀ ಹರ್ನಾಜ್ ಸಂಧು 'ಮಿಸ್ ಯೂನಿವರ್ಸ್ 2021' ಸ್ಪರ್ಧೆಯಲ್ಲಿ ಗೆದ್ದಿದ್ದು ಮತ್ತು ಅವರು ಸ್ಪರ್ಧೆಯಲ್ಲಿ ಕೊನೆಯ ಪ್ರಶ್ನೆಗೆ ಕೊಟ್ಟ ಉತ್ತರಗಳು ಸಿಕ್ಕಾಪಟ್ಟೆ ಸುದ್ದಿ ಮಾಡಿದ ವಿಷಯಗಳು. ಆದರೆ, ಈಗ ಮಾತ್ರ ಹರ್ನಾಜ್ ಸಂಧು ಧರಿಸಿದ ಕಿರೀಟದ ಮೇಲೆಯೇ ಎಲ್ಲರ ಕಣ್ಣು ಬಿದ್ದಿದೆ. ಅಂದಹಾಗೆ, ನೀವು ಇದರ ಬೆಲೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಿ. 
ಹೌದು, ಈ ಮಿಸ್ ಯೂನಿವರ್ಸ್ ಕಿರೀಟದ ಬೆಲೆ ಬರೋಬ್ಬರಿ ಯುಎಸ್ ಡಾಲರ್ 5 ಮಿಲಿಯನ್, ಅಂದರೆ 38 ಕೋಟಿ ಅಂತೆ. ಹಾಗಾದರೆ ಇದರ ವಿಶೇಷತೆ?
  1. ಮೌವಾದ್ ವಿನ್ಯಾಸಕರು ಈ ಕಿರೀಟವನ್ನು ತಯಾರಿಸಿದವರು.
  2. ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟವಾಗಿದೆ.
  3. ಈ ಕಿರೀಟವು ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಮತ್ತು ಸೌಂದರ್ಯ ಎಂಬ ಅಂಶಗಳನ್ನು ಸಂಕೇತಿಸುತ್ತದೆ. 
  4. ಪ್ರಕೃತಿ, ಶಕ್ತಿ, ಸೌಂದರ್ಯ, ಸ್ತ್ರೀತ್ವ ಮತ್ತು ಏಕತೆ ಎಂಬ ಆಂಶಗಳಿಂದ ಸ್ಫೂರ್ತಿ ಪಡೆದ ಈ ಕಿರೀಟವು 1,725 ಬಿಳಿ ವಜ್ರಗಳು ಮತ್ತು ಮೂರು ಗೋಲ್ಡನ್ ಕ್ಯಾನರಿ ವಜ್ರಗಳನ್ನು ಒಳಗೊಂಡಿದೆ.
  5. ಮಿಸ್ ಯೂನಿವರ್ಸ್ ಕಿರೀಟದಲ್ಲಿ ಹೆಣೆದ ಎಲೆಗಳು, ದಳಗಳು ಮತ್ತು ಬಳ್ಳಿಗಳು ಏಳು ಖಂಡಗಳ (7 Continents) ಸಮುದಾಯಗಳನ್ನು ಪ್ರತಿನಿಧಿಸುತ್ತವೆ.
  6. ಕಿರೀಟದ ಕೇಂದ್ರಭಾಗದಲ್ಲಿ 62.83 ಕ್ಯಾರೆಟ್ ತೂಕದ ಭವ್ಯವಾದ ಮಿಶ್ರ ಕಟ್ ಗೋಲ್ಡನ್ ಕ್ಯಾನರಿ ವಜ್ರವನ್ನು ಹೊಂದಿದೆ.          
ಇನ್ನು, ಈ ಕಿರೀಟದ ನಂತರ ಅತ್ಯಂತ ದುಬಾರಿ ಕಿರೀಟ ಎನಿಸಿಕೊಳ್ಳುವುದು 5 ಕೋಟಿ ಬೆಲೆ ಬಾಳುವ ವಿಶ್ವ ಸುಂದರಿ ಕಿರೀಟ. ಸದ್ಯ, 2019 ರಲ್ಲಿ ಮಿಸ್ ಸೌತ್ ಆಫ್ರಿಕಾ ಝೋಜಿಬಿನಿ ತುಂಜಿ ಮತ್ತು 2020 ರಲ್ಲಿ ಮಿಸ್ ಮೆಕ್ಸಿಕೋ ಆಂಡ್ರಿಯಾ ಮೆಜಾ ಅವರು ಈ ವಿಶ್ವದ ಅತ್ಯಂತ ದುಬಾರಿ ಕಿರೀಟವನ್ನು ಧರಿಸಿದ್ದರು. ಇದೀಗ, ಅದನ್ನು ಮಿಸ್ ಇಂಡಿಯಾ ಹರ್ನಾಜ್ ಸಂಧು ಧರಿಸಿದ್ದಾರೆ. 2021ರಲ್ಲಿ ಹರ್ನಾಜ್ ಸಂಧು ಅವರು 1994 ರಲ್ಲಿ ನಟಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ನಟಿ ಲಾರಾ ದತ್ತಾ ನಂತರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ. ಈ ಕಿರೀಟದ ಬೆಲೆ ಗೊತ್ತಾದ ಕೂಡಲೆ ಈಗ ನೆಟ್ಟಿಗರು ಶಾಕ್ ಆಗಿದ್ದಾರೆ.