ಸಿನಿವಾಣಿ

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ 'ಗುಬ್ಬಿಮರಿ'ಯ ಹೋರಾಟ

ಬೆಂಗಳೂರು: ಕೆಲವರಿಗೆ ಹೆಣ್ಣು ತಾಯಿಯಾಗಿ ಬೇಕು. ಹೆಂಡತಿಯಾಗಿ ಬೇಕು. ಆದರೆ, ಮಗಳಾಗಿ ಮಾತ್ರ ಬೇಡ. ಕಾಲ ಎಷ್ಟು ಮುಂದುವರೆದಿದ್ದರೂ, ಇನ್ನೂ ಕೆಲವರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಅಂಥವರಿಗೆ ಅರಿವು ಮೂಡಿಸುವ ಸಲುವಾಗಿ 'ಗುಬ್ಬಿಮರಿ' ಎಂಬ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿದೆ.

ಗುಬ್ಬಿ ಟೆಂಟ್ ಲಾಂಛನದಲ್ಲಿ ಆನಂದಬಾಬು ಹಾಗೂ ಡಾ. ನಿಶ್ಚಿತ ನಿರ್ಮಿಸಿರುವ ಹಾಗೂ ಮಧು ಡಕಣಾಚಾರ್ ನಿರ್ದೇಶನದ 'ಗುಬ್ಬಿಮರಿ' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಧು, 'ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು. ನಾನು ಈ ಹಿಂದೆ ಕೆಲವು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದೆ. ಇದು ಮೊದಲ ಚಿತ್ರ. ನಾನು ಕಥೆಯನ್ನು ಆನಂದಬಾಬು ಅವರಿಗೆ ಹೇಳಿದೆ. ಅವರು ನಿರ್ಮಾಣಕ್ಕೆ ಮುಂದಾದರು. ಅವರ ಮೂಲಕ ಡಾ. ನಿಶ್ಚಿತ ಪರಿಚಿತರಾದರು. ಇಬ್ಬರೂ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ' ಎಂದರು.

'ಗುಬ್ಬಿಮರಿ' ಚಿತ್ರಕ್ಕೆ ಸುಂದರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. 'ಇದು ಮಕ್ಕಳ ಚಿತ್ರವಲ್ಲ. ಮಕ್ಕಳ ಜೊತೆಗೆ ಹಿರಿಯರು ನೋಡಬೇಕಾದ ಚಿತ್ರ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದಾರೆ. ನೋಡಿ ಹಾರೈಸಿ' ಅವರು ಹೇಳಿದರು.

ಈ ಚಿತ್ರದಲ್ಲಿ ಮಾಸ್ಟರ್ ಚಿನ್ಮಯ್, ಮಾಸ್ಟರ್ ಸಂಜಯ್, ಸಿಂಧು, 'ಕಾಮಿಡಿ ಕಿಲಾಡಿಗಳು' ಸಂತು, 'ಕಾಮಿಡಿ ಕಿಲಾಡಿಗಳು' ಚಂದ್ರು, ಆಶಾ, ಪ್ರಿಯಾಂಕಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ದೀಪು - ಸಿದ್ದು ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕುಣಿಗಲ್ ಸಂಕಲನ ಈ ಚಿತ್ರಕ್ಕಿದೆ.