ಬೆಂಗಳೂರು: ಒಂದೂವರೆ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು ಸುಮಂತ್ ಶೈಲೇಂದ್ರ ಮತ್ತು ಕವಿತಾ ಗೌಡ ಅಭಿನಯದ ‘ಗೋವಿಂದ ಗೋವಿಂದ’. ಎಲ್ಲ ಮುಗಿದು ಇನ್ನೇನು ಬಿಡುಗಡೆ ದಿನಾಂಕ ಘೋಷಣೆಯಾಗಬೇಕು ಎನ್ನುವಷ್ಟರಲ್ಲೇ ಕೋವಿಡ್ ಘೋಷಣೆಯಾಯಿತು. ಹಾಗಾಗಿ, ಚಿತ್ರದ ಬಿಡುಗಡೆ ಸಹ ಮುಂದೆಮುಂದೆ ಹೋಯಿತು. ಹಾಗೆ ಮುಂದೆ ಹೋದ ಚಿತ್ರ, ಈಗ ಅಂತಿಮವಾಗಿ ನ.26ಕ್ಕೆ ಬಿಡುಗಡೆಯಾಗುತ್ತಿದೆ. ಸುಮಂತ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ನಾಲ್ಕು ವರ್ಷವಾಗಿತ್ತು. ಇನ್ನು, ಕವಿತಾ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಈ ಚಿತ್ರದಲ್ಲಿ ಅವರಿಬ್ಬರ ಜತೆಗೆ ಭಾವನಾ ಮೆನನ್, ರೂಪೇಶ್ ಶೆಟ್ಟಿ, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದಾರೆ.
ಇದೊಂದು ಕಾಮಿಡಿ ಚಿತ್ರ ಎನ್ನುವ ಸುಮಂತ್, ತಮ್ಮೊಬ್ಬರಿಂದಲೇ ನಗಿಸುವುದು ಕಷ್ಟ ಎಂದು ಒಪ್ಪಿಕೊಳ್ಳುತ್ತಾರೆ. ‘ಈ ಚಿತ್ರದಲ್ಲಿ ನನ್ನ ಸ್ನೇಹಿತರಾಗಿ ಪವನ್ ಕುಮಾರ್ ಮತ್ತು ವಿಜಯ್ ಚೆಂಡೂರ್ ನಟಿಸಿದ್ದು, ನಾವು ಮೂವರೂ ಸೇರಿ ನಗಿಸುವ ಪ್ರಯತ್ನ ಮಾಡಿದ್ದೇವೆ. ಈ ಚಿತ್ರದಲ್ಲಿ ನಗುವಿಗೆ ಮೋಸವಿಲ್ಲ’ ಎನ್ನುತ್ತಾರೆ ಅವರು.
ಕವಿತಾ ಗೌಡಗೆ ಚಿತ್ರದಲ್ಲಿ ಹೆಚ್ಚು ಸಂಭಾಷಣೆ ಇಲ್ಲವಂತೆ. ಆದರೆ, ಒಳ್ಳೆಯ ಪಾತ್ರ ಸಿಕ್ಕ ಖುಷಿಯಲ್ಲಿ ಅವರಿದ್ದಾರೆ. ಈ ಚಿತ್ರವನ್ನು ತಿಲಕ್ ನಿರ್ದೇಶಿಸಿದರೆ, ಶೈಲೇಂದ್ರ ಬಾಬು, ರವಿ ಗರಣಿ ಮತ್ತು ಕಿಶೋರ್ ಜಂಟಿಯಾಗಿ ನಿರ್ವಿುಸಿದ್ದಾರೆ.