ಸಿನಿವಾಣಿ

ಕೆಆರ್​ಕೆ ಜತೆ ಮಾತಾಡಿ ಎಷ್ಟೋ ವರ್ಷ ಆಯ್ತು ... ಗೋವಿಂದ ಸ್ಪಷ್ಟನೆ

GovGobiಮುಂಬೈ: ಸಲ್ಮಾನ್​ ಖಾನ್​ ಮತ್ತು ಕೆಆರ್​ಕೆ ನಡುವಿನ ಜಗಳ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಈ ವಿಷಯವಾಗಿ ಹಿರಿಯ ನಟ ಗೋವಿಂದ ಎಂಟ್ರಿ ಕೊಟ್ಟಿದ್ದು, ಅನವಶ್ಯಕವಾಗಿ ತಮ್ಮ ಹೆಸರನ್ನು ಯಾಕೆ ಎಳೆದು ತರುತ್ತೀರಿ ಎಂದು ಕೆಆರ್​ಕೆಯನ್ನು ಪ್ರಶ್ನೆ ಮಾಡಿದ್ದಾರೆ.

ರಾಧೇ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಿಕ್ಕೆ, ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕೆಆರ್​ಕೆ ಮೇಲೆ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಚಿತ್ರದ ಬಗ್ಗೆ ಎಲ್ಲರೂ ಕೆಟ್ಟದಾಗಿ ಮಾತನಾಡುವಾಗ, ಸಲ್ಮಾನ್​ ತಮ್ಮೊಬ್ಬರ ಮೇಲೆ ಮಾತ್ರ ಯಾಕೆ ಮಾನನಷ್ಟ ಮೊಕ್ಕದಮ್ಮೆ ಹೂಡಿದ್ದಾರೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಇಂಥ ಸಂದರ್ಭದಲ್ಲಿ ಗೋವಿಂದ ಸೇರಿದಂತೆ ಬಾಲಿವುಡ್​ನ ಹಲವು ನಟರು ತಮ್ಮ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದರು. ಸಲ್ಮಾನ್​ ಮತ್ತು ಗೋವಿಂದ ನಡುವೆ ಕೆಲವು ವರ್ಷಗಳಿಂದ ವೈಮನಸ್ಯ ಇದ್ದು, ಅದೇ ಕಾರಣಕ್ಕೆ ಅವರು ಕೆಆರ್​ಕೆ ತರಹದವರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಇಷ್ಟು ದಿನ ಸುಮ್ಮನಿದ್ದ ಗೋವಿಂದ, ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದು ತನ್ನ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಎಂದಿದ್ದಾರೆ. 'ನಾನು ಕೆಆರ್​ಕೆ ಬೆನ್ನಿಗೆ ನಿಂತಿದ್ದೇನೆ ಎಂಬ ವಿಷಯ ಮಾಧ್ಯಮಗಳಿಂದ ಕೇಳಿದೆ. ಕೆಆರ್​ಕೆ ಜತೆಗೆ ಮಾತನಾಡಿಯೇ ಎಷ್ಟೋ ವರ್ಷಗಳಾಗಿವೆ. ಯಾವುದೇ ಮೀಟಿಂಗ್ ಇಲ್ಲ, ಫೋನ್​ ಕಾಲ್​ ಇಲ್ಲ, ಕೊನೆ ಪಕ್ಷ ಮೆಸೇಜ್​ ಕೂಡಾ ಹಾಕಿಲ್ಲ. ಬಹುಶಃ ಬೇರೆ ಯಾರೋ ಗೋವಿಂದ ಎನ್ನುವವರು ಕೆಆರ್​ಕೆ ಸಪೋರ್ಟ್​ ಕೊಟ್ಟಿರಬೇಕು. ಅದೇ ಕಾರಣಕ್ಕೆ, ಕೆಆರ್​ಕೆ ತಮ್ಮ ಟ್ವೀಟ್​ನಲ್ಲಿ ನನ್ನ ಹೆಸರನ್ನು ಟ್ಯಾಗ್​ ಮಾಡಿಲ್ಲ. ನಿಜ ಹೇಳಬೇಕೆಂದರೆ, ಆ ಸ್ವಯಂಘೋಷಿತ ವಿಮರ್ಶಕ ನನ್ನ ಬಗ್ಗೆಯೂ ಬಹಳ ಕೆಟ್ಟದಾಗಿ ಮಾತನಾಡಿದ್ದರು' ಎಂದು ಗೋವಿಂದ ಹೇಳಿಕೊಂಡಿದ್ದಾರೆ.

'ಸಲ್ಮಾನ್​ ಮತ್ತು ಕೆಆರ್​ಕೆ ನಡುವೆ ಏನಾಗಿದೆ ಎಂಬ ವಿಷಯ ನನಗೆ ಗೊತ್ತಿಲ್ಲ. ಹಾಗೆಯೇ, ನನ್ನ ಹೆಸರು ಯಾಕೆ ಈ ವಿಷಯದಲ್ಲಿ ತಳುಕು ಹಾಕಿಕೊಂಡಿತೋ ಎಂಬುದೂ ಗೊತ್ತಿಲ್ಲ. ಬರೀ ಇದೊಂದೇ ವಿಷಯವಲ್ಲ, ಕಾರ್ತಿಕ್​ ಆರ್ಯನ್​ ಯಾವುದೋ ಸಿನಿಮಾದಿಂದ ಹೊರಬಂದಿದ್ದಕ್ಕೆ ನನ್ನ ಹೆಸರನ್ನು ಎಳೆದು ತರಲಾಗಿದೆ. ನನ್ನ ಹೆಸರನ್ನು ಇಂತಹ ವಿಷಯಗಳಿಗೆ ಯಾಕೆ ಎಳೆದು ತರುತ್ತಾರೋ ಗೊತ್ತಿಲ್ಲ. ಅದರಲ್ಲೂ ಕರೊನಾದಿಂದ ಜನ ಕಂಗೆಟ್ಟಿರುವಾಗ, ಇಂತಹ ತರಲೆ ಕೆಲಸಗಳು ಬೇಕಾ?' ಎಂದು ಪ್ರಶ್ನಿಸಿದ್ದಾರೆ.