ಸಿನಿವಾಣಿ

ಗೋದ್ರಾ ಈಗ ಡಿಯರ್ ವಿಕ್ರಂ; ವೂಟ್ ಸೆಲೆಕ್ಟ್​ನಲ್ಲಿ ಬಿಡುಗಡೆ ಆಗಲಿದೆ ಸತೀಶ್ ಚಿತ್ರ

ಬೆಂಗಳೂರು: ಐದು ವರ್ಷಗಳೇ ಆಗಿವೆ ಸತೀಶ್ ನೀನಾಸಂ ಅಭಿನಯದ ‘ಗೋದ್ರಾ’ ಚಿತ್ರ ಸೆಟ್ಟೇರಿ. ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗುತ್ತಾ ಹೋಯಿತು. ಕೊನೆಗೆ ಎಲ್ಲ ಮುಗಿದು ಇನ್ನೇನು ಸೆನ್ಸಾರ್ ಆಗಬೇಕು ಎನ್ನುವಷ್ಟರಲ್ಲಿ ಚಿತ್ರ ನೋಡಿದ ಸೆನ್ಸಾರ್ ಮಂಡಳಿಯ ಅಧಿಕಾರಿಗಳು ಚಿತ್ರದ ಹೆಸರು ಬದಲಾಯಿಸುವುದುದಕ್ಕೆ ಸೂಚಿಸಿದರು. ಚಿತ್ರಕ್ಕೆ ಏನು ಹೆಸರು ಇಡಬೇಕು ಎಂದು ಹಲವು ದಿನಗಳ ಕಾಲ ತಲೆ ಕೆಡಿಸಿಕೊಂಡ ಚಿತ್ರತಂಡ, ಈಗ ಕೊನೆಗೂ ಒಂದು ಹೆಸರನ್ನು ಫೈನಲ್ ಮಾಡಿದೆ. ಅದೇ ‘ಡಿಯರ್ ವಿಕ್ರಂ’.

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರವ ಸತೀಶ್, ‘ಕ್ರಾಂತಿ ಮತ್ತು ಪ್ರೀತಿಯ ಸುತ್ತ ಹೆಣೆದಿರುವ ಸುಂದರವಾದ ಕಥನ ಇದು. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಲಾಗಿದೆ. ‘ಗೋದ್ರಾ’, ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈಗನ್ನಡಿ. ಆದರೀಗ ಚಿತ್ರದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿದೆ. ನಿಜ ಹೇಳಬೇಕೆಂದರೆ, ನಮ್ಮ ಸಿನಿಮಾ ಯಾವುದೇ ನೈಜ ಘಟನೆ ಅಥವಾ ಪ್ರದೇಶವನ್ನು ಆಧರಿಸಿದ ಚಿತ್ರವಲ್ಲ. ಹೀಗಾಗಿ ಜನರಿಗೆ ಗೊಂದಲ ಮೂಡಿಸಬಾರದು ಎಂಬ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ಯೋಚಿಸಿದೆ. ‘ಗೋದ್ರಾ’, ‘ಡಿಯರ್ ವಿಕ್ರಂ’ ಆಗಿ ಪ್ರೇಕ್ಷಕರೆದುರು ಬರಲಿದೆ’ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಸೋನು ಗೌಡ ಮುಂತಾದವರು ನಟಿಸಿದ್ದು, ಜೇಕಬ್ ವರ್ಗೀಸ್ ಜತೆಗೆ ಕೆಲಸ ಮಾಡಿದ್ದ ನಂದೀಶ್ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರವು ಚಿತ್ರಮಂದಿರಗಳ ಬದಲಿಗೆ ನೇರವಾಗಿ ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.