ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಧ್ರುವ ಸರ್ಜಾ ನಟಿಸುತ್ತಿರುವ, ಎ.ಪಿ. ಅರ್ಜುನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’. ಈ ಚಿತ್ರದ ಮೂಲಕ ಇಟಲಿ ಮೂಲದ ಡಾನ್ಸರ್, ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ‘ಗೆಸ್ಟ್ ಇನ್ ಲಂಡನ್’, ‘ವೆಲ್ಕಮ್ ಟು ಬಜರಂಗ್‌ಪುರ್’, ‘ಐ ಲವ್ ಯೂ ಟ್ರೂಲಿ’ ಚಿತ್ರಗಳು ಸೇರಿ ‘ಕೆರೊಲಿನ್ ಕಾಮಾಕ್ಷಿ’ ವೆಬ್‌ಸರಣಿಯಲ್ಲೂ ನಟಿಸಿರುವ ಜಾರ್ಜಿಯಾಗೆ ‘ಮಾರ್ಟಿನ್’ ಮೊದಲ ಸೌತ್ ಸಿನಿಮಾ. ಚಿತ್ರದ ವಿಶೇಷ ಹಾಡಿನಲ್ಲಿ ಜಾರ್ಜಿಯಾ, ಧ್ರುವ ಸರ್ಜಾ ಜತೆ ಕುಣಿದು ಕುಪ್ಪಳಿಸಿದ್ದಾರೆ. ‘ಈ ಸ್ಪೆಷಲ್ ಹಾಡಿಗೆ ಒಬ್ಬರು ಉತ್ತಮ ಬೆಲ್ಲಿ ಡಾನ್ಸರ್ ಬೇಕಿತ್ತು. ಜಾರ್ಜಿಯಾ ಒಳ್ಳೆ ಬೆಲ್ಲಿ ಡಾನ್ಸರ್ ಅಂತ ಗೊತ್ತಾಗಿ, ಅವರನ್ನು ಆಯ್ಕೆ ಮಾಡಿಕೊಂಡಿವೆ. ಡಾನ್ಸ್ ತರಬೇತಿಗೆ ಐದು ದಿನ ಹಾಗೂ ಸಾಂಗ್ ಶೂಟಿಂಗ್‌ಗೆ ಐದು ದಿನ, ಹೀಗೆ ಒಟ್ಟು ಹತ್ತು ದಿನ ಜಾರ್ಜಿಯಾ ಚಿತ್ರತಂಡದ ಜತೆಗಿದ್ದರು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಎ.ಪಿ. ಅರ್ಜುನ್.
3.5 ಕೋಟಿ ರೂ. ಸೆಟ್!
‘ಮಾರ್ಟಿನ್’ ಚಿತ್ರದ ಈ ವಿಶೇಷ ಹಾಡಿನ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಇಮ್ರಾನ್ ಸರ್ದಾರಿಯಾ ನೃತ್ಯನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಜಾರ್ಜಿಯಾ ಜತೆ 40 ಮಂದಿ ನುರಿತ ವಿದೇಶಿ ಬೆಲ್ಲಿ ಡಾನ್ಸರ್‌ಗಳು ಈ ಹಾಡಿನಲ್ಲಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಚಿತ್ರದಲ್ಲಿ ನಾಯಕ ಪಾಕಿಸ್ತಾನಕ್ಕೆ ತೆರಳಿದಾಗ ಅಲ್ಲಿ ನಡೆಯುವ ಸನ್ನಿವೇಶಗಳಲ್ಲಿ ಈ ಸಾಂಗ್ ಮೂಡಿಬರಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟ ನಾನಿ
‘ಮಾರ್ಟಿನ್’ನಲ್ಲಿ ಮಣಿ ಶರ್ಮಾ ಸಂಗೀತದ ನಾಲ್ಕು ಹಾಡುಗಳಿವೆ. ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನು ಮೂರು ಹಾಡುಗಳ ಶೂಟಿಂಗ್ ಆಗಬೇಕಿದೆ. ಇದೇ ತಿಂಗಳ 10ರಿಂದ ಅ.10ರ ಒಳಗೆ ಮೂರೂ ಹಾಡುಗಳ ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ. ಇದೇ ವಷರ್ದಂತ್ಯಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. -ಎ.ಪಿ. ಅರ್ಜುನ್, ನಿರ್ದೇಶಕ