ಮಾಜಿ ಸಚಿವ, ಗಣಿದಣಿ ಗಾಲಿ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಸಿನಿರಂಗಕ್ಕೆ ಧುಮುಕ್ಕತ್ತಿರುವ ಸುದ್ದಿ ಕೆಲ ದಿನಗಳ ಹಿಂದೆ ಅಧಿಕೃತವಾಗಿತ್ತು. ಇನ್ನು, ಇಂದು (ಮಾರ್ಚ್ 4 ರಂದು) ಬೆಂಗಳೂರಿನ ತಾಜ್ ವೆಸ್ಟ್ಎಂಡ್ನಲ್ಲಿ ಕಿರೀಟಿ ಮೊದಲ ಸಿನಿಮಾದ ಮುಹೂರ್ತ ನೆರವೇರಿದೆ. ಹೌದು, ತೆಲುಗಿನ ಖ್ಯಾತ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಕಿರೀಟಿ ಅವರ ಈ ಮೊದಲ ಸಿನಿಮಾವನ್ನು ನಿರ್ಮಿಸುತ್ತಿದ್ದು, ಹೊಸಬರಾದ ರಾಧಾ ಕೃಷ್ಣ ಈ ಚಿತ್ರಕ್ಕೆ ತೆಲುಗು-ಕನ್ನಡ ಭಾಷೆಯಲ್ಲಿ ನಿರ್ದೇಶಕರಾಗಿದ್ದಾರೆ. ಇನ್ನು, ಕಿರೀಟಿರ ಮೊದಲ ಸಿನಿಮಾಗೆ ಭಾರತ ದೇಶದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಎಸ್.ರಾಜಮೌಳಿ ಮತ್ತು ನಟ ವಿ. ರವಿಚಂದ್ರನ್ ಅವರು ಅತಿಥಿಗಳಾಗಿ ಆಗಮಿಸಿ ಕಿರೀಟಿ ಅವರ ಮೊದಲ ಶಾಟ್ಗೆ ಕ್ಲ್ಯಾಪ್ ಹೊಡೆದು, ಶುಭ ಹಾರೈಸಿದ್ದಾರೆ.
ಇಂದೇ, ನಟ ಕಿರೀಟಿ ಅವರ ಒಂದು ಇಂಟ್ರೋಡಕ್ಷನ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ನಲ್ಲಿ ಸಖತ್ ಸ್ಟಂಟ್ಸ್ಗಳನ್ನು ಮಾಡಿದ್ದಾರೆ ಗಾಲಿ ಜನಾರ್ದನ ಪುತ್ರ ಕಿರೀಟಿ. ಕಿರೀಟಿ ಅವರ ಇಂಟ್ರೋಡಕ್ಷನ್ ಟೀಸರ್ ನೋಡಿದ ಎಸ್.ಎಸ್.ರಾಜಮೌಳಿ ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ‘''ಕಿರೀಟಿಗೆ ತುಂಬಾನೇ ಟ್ಯಾಲೆಂಟ್ ಇದೆ. ಅವರು ಸ್ಟಂಟ್ಸ್, ಡ್ಯಾನ್ಸ್, ನಟನೆ ಅಂತ ಎಲ್ಲವನ್ನೂ ಮಾಡುವ ಸಾಮರ್ಥ್ಯ ಇದೆ. ಜತೆಗೆ, ಕಿರೀಟಿ ಒಂದು ಒಳ್ಳೆಯ ತಂಡ ಸೇರಿದ್ದಾರೆ ಅನ್ನೋದು ಖುಷಿಯ ವಿಚಾರ’ ಎಂದರು ರಾಜಮೌಳಿ. ''ಕಿರೀಟಿ ಅಂದರೆ ಅರ್ಜುನ ಅರ್ಥ ಬರುತ್ತೆ. ಕಿರೀಟಿಗೆ ಸಾರಥಿ ರಾಧಾಕೃಷ್ಣ. ನಾನು ಈ ಚಿತ್ರದಲ್ಲಿ ಅಪ್ಪನ ಪಾತ್ರ ಮಾಡ್ತಿದ್ದೇನೆ. ನಿರ್ದೇಶಕರಿಗೆ ಹಾಗೂ ಕಿರೀಟಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ.'' ಎಂದು ನಟ ವಿ.ರವಿಚಂದ್ರನ್ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಬರೋಕೆ ಆಗದಿದ್ದರೂ ಒಂದು ವಿಡಿಯೋ ಮೂಲಕ ಡೆಬ್ಯೂ ಹೀರೋ ಕಿರೀಟಿಗೆ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಕೂಡಾ ಶುಭಾಶಯ ಕಳುಹಿಸಿಕೊಟ್ಟಿದ್ದಾರೆ. ಕಿರೀಟ ಅವರ ಹೆಸರಿಲ್ಲದ ಮೊದಲ ಸಿನಿಮಾದಲ್ಲಿ ಖ್ಯಾತ ನಟಿ ಜೆನೀಲಿಯಾ, ಕನ್ನಡತಿ ನಟಿ ಶ್ರೀಲೀಲಾ ಹಾಗೂ ನಟ ವಿ.ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ''ಸತ್ಯ ಇನ್ ಲವ್' ಸಿನಿಮಾ ನಂತರ 14 ವರ್ಷಗಳ ಬಳಿಕ ಜನಾರ್ಧನ್ ರೆಡ್ಡಿಯವರ ಪುತ್ರ ಕಿರೀಟಿಯವರ ಈ ಡೆಬ್ಯೂ ಚಿತ್ರದ ಮೂಲಕ ಕನ್ನಡಕ್ಕೆ ಕಮ್ ಬ್ಯಾಕ್ ಮಾಡ್ತೀರೋದಕ್ಕೆ ಖುಷಿಯಿದೆ'' ಎಂದ ಜೆನಿಲಿಯಾ ತಿಳಿಸಿದ್ದಾರೆ. ಒಂದು ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥೆಯಾಗಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇರಲಿದ್ದು, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಲಿದ್ದಾರೆ.
ಈ ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಅದು ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ’ ಸಿನಿಮಾಗೆ ಛಾಯಾಗ್ರಾಹಕರಾದ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ಮತ್ತೊಂದೆಡೆ, ಭಾರತದ ಖ್ಯಾತ ಆರ್ಟ್ ಡೈರೆಕ್ಟರ್ ಆಗಿರುವ ರವೀಂದರ್ ಮತ್ತು ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಈ ಸಿನಿಮಾಗೆ ಕೆಲಸ ಮಾಡಲಿದ್ದಾರೆ. ಇನ್ನು, ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದ ದಿನದ ಮುಂಚೆಯೇ ನಟ ಕಿರೀಟಿ ಅಪ್ಪು ಅವರನ್ನು ನೆನೆದು ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಭಾವುಕ ಪೋಸ್ಟ್ ಮಾಡಿದ್ದು, ಅವರ ಪೋಸ್ಟ್ ವೈರಲ್ ಆಗಿದೆ.