ಸಿನಿವಾಣಿ

ಫ್ರೆಂಡ್​ಷಿಪ್​ ಡೇ: ಸ್ನೇಹಕ್ಕೆ ಬದ್ಧ ಎಲ್ಲದಕ್ಕೂ ಸಿದ್ಧ

ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ, ಜತೆಗೆ ಕೆಲ ಸೆಲೆಬ್ರಿಟಿಗಳ ಅನುಭವಗಳೂ ಇಲ್ಲಿವೆ...

ನನ್ನ ಮತ್ತು ಧನಂಜಯ್ ಸ್ನೇಹ 2010ರಿಂದ ಶುರುವಾದದ್ದು. ಆರಂಭದಲ್ಲಿ ಒಂದಷ್ಟು ಸಲ ಭೇಟಿಯಾಗಿದ್ದರೂ, ಅಷ್ಟಾಗಿ ಬೆರೆತಿರಲಿಲ್ಲ. ಅದಾದ ಮೇಲೆ ಇಬ್ಬರೂ ‘ವೆನ್ ಐ ಆಮ್ ಗಾನ್’ ಅನ್ನೋ ಆಲ್ಬಂನಲ್ಲಿ ಕಾಣಿಸಿಕೊಂಡೆವು. ಬಳಿಕ ಇಬ್ಬರೂ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಕಥೆಗಳು ಬಂದವು. ಆದರೆ, ಆ ಯಾವ ಸಿನಿಮಾಗಳೂ ಸೆಟ್ಟೇರಲಿಲ್ಲ. ಸೂರಿ ಸರ್ ‘ಟಗರು’ ಚಿತ್ರಕ್ಕೆ ನಾನು ಆಯ್ಕೆ ಆದೆ. ಅದರಲ್ಲಿ ಧನಂಜಯ ಸಹ ನಟಿಸುತ್ತಿರುವ ಬಗ್ಗೆ ಗೊತ್ತಾಯ್ತು. ಒಂದೂವರೆ ವರ್ಷ ಇಬ್ಬರೂ ಜತೆಗಿದ್ದೆವು. ಒಂದು ಹೊಸ ಪರ್ವ ಅಲ್ಲಿಂದ ಶುರುವಾಯಿತು. ಇಬ್ಬರ ನಡುವಿನ ಸಾಕಷ್ಟು ವಿಚಾರಗಳು ಶೇರ್ ಆದವು. ಇದೆಲ್ಲವನ್ನೂ ನೋಡುತ್ತಿದ್ದರೆ, ನಮ್ಮಿಬ್ಬರ ಜರ್ನಿಯೂ ಒಂದು ರೀತಿ ವಿಭಿನ್ನವಾಗಿಲ್ಲ. ಅವನು ಅರಸೀಕೆರೆ, ನನ್ನದು ಅರಕಲಗೂಡು. ಅವನು ಅರಸಿಕೆರೆಯಲ್ಲಿ ಶಾಲೆ ಮುಗಿಸಿ ಮೈಸೂರಿಗೆ ಬಂದ. ನಾನು ಮೈಸೂರಿನಲ್ಲಿ ಕಲಿತು ಬೆಂಗಳೂರಿಗೆ ಬಂದೆ. ಇಬ್ಬರೂ ಸಾಫ್ಟ್​ವೇರ್. ಇಬ್ಬರೂ ರಂಗಭೂಮಿ ಹಿನ್ನೆಲೆಯವರೇ. ಇಬ್ಬರೂ ಒಂಚೂರು ಒರಟರು. ‘ಟಗರು’ ಶೂಟಿಂಗ್ ಹೊತ್ತಿನಲ್ಲಿಯೇ ನಮ್ ಸ್ನೇಹ ಗಾಢವಾಯಿತು. ಒಂದೇ ಮನೆಯವರಂತಾದೆವು. ಸ್ನೇಹದ ವಿಚಾರ ಬಂದಾಗ ಧನಂಜಯ ಬದಟಛಿ. ಏನಾದರೂ ತಪು್ಪ ಅನಿಸಿದರೆ ಅಲ್ಲಿಯೇ ಅದನ್ನು ಮುಲಾಜಿಲ್ಲದೆ ಹೇಳುವ ಮನಸ್ಸವನದು. ‘ಮಗಾ ಇದು ಬೇಡ ನನಗ್ಯಾಕೋ ಸರಿ ಅನಿಸ್ತಿಲ್ಲ ...’ ಎಂದು ಹೇಳಿಬಿಡುತ್ತಾನೆ. ಹಾಗಾಗಿ ಅವನ ಜತೆ ಶಾಲೆಯಿಂದ ಹಿಡಿದು ಕಾಲೇಜ್​ವರೆಗಿನ ಎಲ್ಲ ಸ್ನೇಹಿತರೂ ಈಗಲೂ ಆತನ ಸಂಪರ್ಕದಲ್ಲಿದ್ದಾರೆ. ಆ ಸ್ನೇಹವನ್ನು ನಿಭಾಯಿಸಲು ಬದ್ಧತೆ ಬೇಕು. ಅದು ಅವನಲ್ಲಿದೆ. ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ನನ್ನ ಬಗ್ಗೆ ಯಾರೋ ಕೆಟ್ಟದಾಗಿ ಒಂದು ಮಾತು ಹೇಳಿದ್ದರು. ಅದನ್ನು ಧನಂಜಯ್ ಅಲ್ಲೇ ನಿಂತು ಕೇಳಿಸಿಕೊಂಡಿದ್ದ. ಅಲ್ಲಿ ಅವರಿಗೆ ಉತ್ತರ ನೀಡದೆ, ಪ್ರಶಸ್ತಿ ಬಂದ ತಕ್ಷಣ ವೇದಿಕೆ ಮೇಲೆ, ಪಡೆದ ಪ್ರಶಸ್ತಿಯಲ್ಲಿ ನನ್ನ ಹೆಸರನ್ನು ಸೇರಿಸಿ, ಈ ಅವಾರ್ಡ್ ನನಗಷ್ಟೇ ಅಲ್ಲ ವಸಿಷ್ಠನಿಗೂ ಸಲ್ಲಬೇಕು ಎಂದಿದ್ದ. ಹೀಗೆ ಸ್ನೇಹದ ವಿಚಾರ ಬಂದಾಗ ಧನಂಜಯ ಬಗ್ಗೆ ತುಂಬ ವಿಚಾರಗಳನ್ನು ಹೇಳಬಹುದು.

| ವಸಿಷ್ಠ ಸಿಂಹ ನಟ