ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೆ ಅಗೌರವ ತೋರಿಸಲಾಗಿದೆ ಎಂಬ ಬೇಸರ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಕೇಳಿಬಂದಿತ್ತು. ಇದೀಗ, ದೂರದ ಅಮೇರಿಕಾದಲ್ಲಿರುವ ಫ್ರಾಂಕ್ಲಿನ್ ಥಿಯೇಟರ್ನವರು, ವಿಜಯ್ಗೆ ಸಂದೇಶ ಪ್ರದಶರ್ನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ.
ಸಂಚಾರಿ ವಿಜಯ್ ಇತ್ತೀಚೆಗೆ ಅಪಘಾತಕ್ಕೀಡಾಗಿ ಬ್ರೇನ್ಡೆಡ್ ಆಗಿ ನಿಧನರಾದರು. ನಂತರದ ದಿನಗಳಲ್ಲಿ, ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ಅಗೌರವ ತೋರಲಾಗಿದೆ ಎಂದು ನಿರ್ದೇಶಕ ಬಿ.ಎಸ್. ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ವಿಜಯ್ ಅವರ ಹಲವು ಅಭಿಮಾನಿಗಳು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಅಮೇರಿಕಾದ ಫ್ರಾಂಕ್ಲಿನ್ ಥಿಯೇಟರ್, ಸಂಚಾರಿ ವಿಜಯ್ಗೆ ಗೌರವ ಸೂಚಿಸಿದೆ. ವಿಜಯ್ ನೆನಪಲ್ಲಿ, 'Always in our Heart , Sanchari Vijay, Gone Yet Not Forgotten' ಎಂಬ ಸಂದೇಶವನ್ನು ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದೆ.
ಈ ವಿಷಯವನ್ನು ಲಿಂಗದೇವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಾರಣರಾದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕನ್ನಡಿಗ ರವಿ ಕಶ್ಯಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.