ಮುಂಬೈ: ಅಂತೂ ಕರಣ್ ಜೋಹರ್ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವರ್ಷ ಕರಣ್ ಜೋಹರ್ ನೀಡಿದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸರಬರಾಜಾಗಿತ್ತು ಮತ್ತು ಅದರಲ್ಲಿ ಭಾಗವಹಿಸಿದ್ದ ನಟ-ನಟಿಯರು ಡ್ರಗ್ಸ್ ತೆಗೆದುಕೊಂಡಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಈ ವಿಷಯವಾಗಿ ತನಿಖೆ ನಡೆಸಿರುವ ಫಾರೆನ್ಸಿಕ್ ಅಧಿಕಾರಿಗಳು, ಕರಣ್ ಜೋಹರ್ಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಇದನ್ನೂ ಓದಿ: ದಿಗಂತ್ ಅಭಿನಯದ ಹೊಸ ಚಿತ್ರದ ಹೆಸರು ಹೀಗಿದೆ …
ಕರಣ್ ಜೋಹರ್, ಕಳೆದ ವರ್ಷದ ಜುಲೈನಲ್ಲಿ ಬಾಲಿವುಡ್ ನಟ-ನಟಿಯರಿಗೆ ತಮ್ಮ ಮನೆಯಲ್ಲಿ ಪಾರ್ಟಿ ಕೊಟ್ಟಿದ್ದರು. ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಮಲೈಕಾ ಅರೋರಾ, ವಿಕ್ಕಿ ಕೌಶಾಲ್ ಸೇರಿದಂತೆ ಬಾಲಿವುಡ್ನ ಹಲವು ಜನಪ್ರಿಯ ನಟ-ನಟಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯ ನಂತರ ಕರಣ್ ಒಂದು ವಿಡಿಯೋ ಶೇರ್ ಮಾಡಿದ್ದರು. ಈ ಪಾರ್ಟಿಯಲ್ಲಿದ್ದ ಹಲವರು ನಶೆಯಲ್ಲಿದ್ದಂತೆ ಕಂಡುಬಂದಿದ್ದರು. ಜತೆಗೆ ವಿಡಿಯೋದ ಕೆಲವು ತುಣುಕಗಳಲ್ಲಿ ಟೇಬಲ್ ಮೇಲೆ ಬಿಳಿಗೆರೆಗಳು ಕಾಣಿಸುತ್ತಿದ್ದವು. ಇದನ್ನು ನೋಡಿದವರೆಲ್ಲರೂ ಇದೊಂದು ಡ್ರಗ್ಸ್ ಪಾರ್ಟಿ ಎಂದಿದ್ದರು.
ಅದಕ್ಕೆ ಪ್ರತಿಯಾಗಿ, ಕಳೆದ ವರ್ಷವೇ ಕರಣ್ ಜೋಹರ್ ಇದು ಡ್ರಗ್ಸ್ ಪಾರ್ಟಿಯಲ್ಲ ಎಂದು ಸ್ಪಷ್ಟೇಕರಣ ಕೊಟ್ಟಿದ್ದರು. ಅಲ್ಲಿಗೆ ಪ್ರಕರಣ ತಣ್ಣಗಾಗಿತ್ತು. ಆದರೆ, ಈ ವರ್ಷ ಯಾವಾಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದವರು ಯಾವಾಗ ಬಾಲಿವುಡ್ ಮತ್ತು ಡ್ರಗ್ಸ್ ಮಾಫಿಯಾದ ನಂಟು ಕೆದಕಿದರೋ, ಆಗ ಮತ್ತೆ ಈ ವಿಡಿಯೋ ವೈರಲ್ ಆಯಿತು.
ಯಾವಾಗ ಈ ವಿಡಿಯೋ ವೈರಲ್ ಆಯಿತೋ, ಆಗ ಈ ಪ್ರಕರಣವನ್ನು ಫಾರೆನ್ಸಿಕ್ ಅಧಿಕಾರಿಗಳಿಗೆ ವಹಿಸಲಾಯಿತು. ಈ ಕುರಿತು ತನಿಖೆ ಮಾಡಿರುವ ಅಧಿಕಾರಿಗಳು, ಕರಣ್ ಜೋಹರ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಗ್ಲಾಸ್ ಟೇಬಲ್ ಮೇಲಿದ್ದ ಬಿಳಿ ಗೆರೆಯು, ಕೇವಲ ಟ್ಯೂಬ್ಲೈಟ್ನ ಪ್ರತಿಫಲನ ಎಂದಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂದು ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾದ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಕರಣ್ ಜೋಹರ್ ಬಗ್ಗೆ ಇದುವರೆಗೂ ಎಲ್ಲರೂ ಅನುಮಾನದಿಂದಲೇ ನೋಡುತ್ತಿದ್ದರು. ಅವರ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿರಬಹುದಾ ಎಂಬ ಗುಮಾನಿ ಎಲ್ಲರಲ್ಲೂ ಇತ್ತು. ಆದರೆ, ಇದೀಗ ಫಾರೆನ್ಸಿಕ್ ಅಧಿಕಾರಿಗಳೇ ಡ್ರಗ್ಸ್ ಬಳಕೆಯಾಗಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟಿರುವುದರಿಂದ ನಿಟ್ಟುಸಿರುಬಿಡುವಂತಾಗಿದೆ.