ಮುಂಬೈ: ಕರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸುಶಾಂತ್, ಮುಂಬೈನ ತಮ್ಮ ಮನೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾಗಿ ಎರಡೂವರೆ ವರ್ಷಗಳೇ ಆಗಿವೆ. ಆದರೂ ಅವರ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದಿಲ್ಲ ಎಂಬ ವಿಷಯ ಬಾಲಿವುಡ್ನಲ್ಲಿ ದೊಡ್ಡ ಸುದ್ದಿಯಾಗಿದೆ.
ಇದನ್ನೂ ಓದಿ: ‘ಟಕ್ಕರ್’ ಕೊಟ್ಟ ಮನೋಜ್ ಕುಮಾರ್ ಈಗ ‘ಧರಣಿ’!
ಬಾಂದ್ರಾದ ಮಾಂಟ್ ಬ್ಲಾಂಕ್ ಬಿಲ್ಡಿಂಗ್ನ ಆರನೇ ಮಹಡಿಯಲ್ಲಿರುವ 3600 ಚದರಡಿ ಇರುವ ಡ್ಯುಪ್ಲೆ ಮನೆಯನ್ನು ಸುಶಾಂತ್ 2019ರ ಕೊನೆಗೆ ಬಾಡಿಗೆಗೆ ಪಡೆದಿದ್ದರು. ಮೂರು ವರ್ಷಗಳ ಕಾಲ ಅಗ್ರೀಮೆಂಟ್ ಇದ್ದು, 2022ಕ್ಕೆ ಮನೆ ಖಾಲಿ ಮಾಡಬೇಕಿತ್ತು ಅಥವಾ ಅಗ್ರೀಮೆಂಟ್ ನವೀಕರಿಸಬೇಕಿತ್ತು.
ಈ ಮನೆಗೆ, ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದ ಸುಶಾಂತ್, ಕೆಲವೇ ತಿಂಗಳುಗಳಲ್ಲಿ ಇನ್ನಿಲ್ಲವಾದರು. ಅವರು ಕೊನೆಯುಸಿರೆಳೆದ ನಂತರ ಮನೆ ಖಾಲಿಯಾಗಿದ್ದು, ಆ ಮನೆಯನ್ನು ಬೇರೆಯವರಿಗೆ ಬಾಡಿಗೆ ಕೊಡುವ ಪ್ರಯತ್ನ ನಡೆದಿದೆ. ಆದರೆ, ಇದುವರೆಗೂ ಆ ಮನೆಗೆ ಯಾರೂ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ರಿಯಲ್ ಎಸ್ಟೇಟ್ ಏಜೆಂಟ್ ರಫೀಕ್ ಮರ್ಚೆಂಟ್, 'ಮನೆ ಬಹಳ ಚೆನ್ನಾಗಿದೆ. ಒಳ್ಳೆಯ ಜಾಗದಲ್ಲಿದೆ. ಜನ ಈ ಮನೆಯನ್ನು ಬಾಡಿಗೆ ಪಡೆಯುವುದಕ್ಕೆ ಉತ್ಸುಕರಾಗಿರುತ್ತಾರೆ. ಆದರೆ, ಯಾವಾಗ ಈ ಮನೆಯಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳುತ್ತಾರೋ, ಹಿಂದೆ ಸರಿಯುತ್ತಾರೆ. ಕೆಲವರಂತೂ ಫ್ಲಾಟ್ ನೋಡಲು ಸಹ ಬರುವುದಿಲ್ಲ. ಈ ಮನೆಯು ಕೇಂದ್ರಬಿಂದುವಾಗಿರುವುದರಿಂದ ಯಾರೂ ಮುಂದೆ ಬರುತ್ತಿಲ್ಲ. ಬಹುಶಃ ಈ ಮನೆಯ ಮಾಲೀಕರು ಬಾಡಿಗೆ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆಗಬಹುದೇನೋ? ಅವರು ಪ್ರತಿ ತಿಂಗಳು ಐದು ಲಕ್ಷಕ್ಕೆ ಒಂದು ರೂಪಾಯಿ ಕಡಿಮೆ ಒಪ್ಪುತ್ತಿಲ್ಲ. ಹಾಗಾಗಿ, ಈ ಮನೆಗೆ ಇನ್ನೂ ಯಾರೂ ಬಂದಿಲ್ಲ' ಎನ್ನುತ್ತಾರೆ.