ಸಿನಿವಾಣಿ

‘ರಾಮನ ಅವತಾರ’ದಲ್ಲಿ ರಿಷಿ … ಚಿತ್ರದ ಮೊದಲ ಲುಕ್​ ಬಿಡುಗಡೆ

ಬೆಂಗಳೂರು: 'ರಾಮನ ಅವತಾರ' ಎಂಬ ಚಿತ್ರದಲ್ಲಿ ರಿಷಿ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಆದರೆ, ಆ ನಂತರ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಆ ಚಿತ್ರ ಸದ್ದಿಲ್ಲದೆ ಮುಗಿರುವುದಷ್ಟೇ ಅಲ್ಲ, ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಫಸ್ಟ್​​ಲುಕ್​ ಬಿಡುಗಡೆಯಾಗಿದೆ.

ಈ ಪೋಸ್ಟರ್​ನಲ್ಲಿ ರಿಷಿ, ರಾಮನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಅರುಣ್​ ಸಾಗರ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶುಭ್ರ ಅಯ್ಯಪ್ಪ ಮತ್ತು ಪ್ರಣೀತಾ ಸುಭಾಷ್​ ನಾಯಾಕಿಯರಾಗಿ ಅಭಿನಯಿಸಿದ್ದಾರೆ.

ಈ ಹಿಂದೆ ಸಿಂಪಲ್​ ಸುನಿ ಕ್ಯಾಂಪ್​ನಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಕೆಲಸ ಮಾಡಿದ ಅನುಭವವಿರುವ ವಿಕಾಸ್​ ಪಂಪಾಪತಿ, ಈ ಚಿತ್ರ ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಇದು ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ. ಇನ್ನು, ಈ ಹಿಂದೆ ರಿಷಿ ಅಭಿನಯದ 'ಆಪರೇಷನ್​ ಅಲಮೇಲಮ್ಮ' ಚಿತ್ರವನ್ನು ನಿರ್ಮಿಸಿದ್ದ ಅಮರೇಜ್​ ಸೂರ್ಯವಂಶಿ ಈ ಚಿತ್ರದ ನಿರ್ಮಾಪಕರು.

'ರಾಮನ ಅವತಾರ' ಒಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರವಾಗಿದ್ದು, ಬೆಂಗಳೂರು, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಜೂನ್​ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.