ಸಿನಿವಾಣಿ

ವಿಜಯ್​ ರಾಘವೇಂದ್ರ ಅಭಿನಯದ 50ನೇ ಚಿತ್ರದ ಫಸ್ಟ್​ ಲುಕ್​ ಅ.26ಕ್ಕೆ

ಬೆಂಗಳೂರು: ಫೆಬ್ರವರಿಯಲ್ಲಿ ಬಿಡುಗಡೆಯಾದ 'ಮಾಲ್ಗುಡಿ ಡೇಸ್​' ಚಿತ್ರದ ನಂತರ ವಿಜಯ್​ ರಾಘವೇಂದ್ರ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ, ಸದ್ದಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತಾದರೂ, ಆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ಲಭ್ಯವಿಲ್ಲ.

ಇದೀಗ ಹೆಚ್ಚಿನ ಮಾಹಿತಿ ಲಭ್ಯವಾಗುವ ಕಾಲ ಬಂದಿದೆ. ಇದೇ ಸೋಮವಾರ ಅಂದರೆ ಅಕ್ಟೋಬರ್​ 26ರಂದು ವಿಜಯ್​ ರಾಘವೇಂದ್ರ ಅಭಿನಯದ ಹೊಸ ಚಿತ್ರದ ಫಸ್ಟ್​ ಲುಕ್​ ಮತ್ತು ಹೆಸರನ್ನು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಚಿತ್ರದ ಕುರಿತಾಗಿ ಬೆಳಕು ಚೆಲ್ಲಾಲಾಗುತ್ತದೆ.

ವಿಶೇಷವೆಂದರೆ, ಇದು ವಿಜಯ್​ ರಾಘವೇಂದ್ರ ಅವರ 50ನೇ ಚಿತ್ರವಂತೆ. ಕನ್ನಡ ಚಿತ್ರರಂಗಕ್ಕೆ 'ಕೊಲ್ಲೂರು ಶ್ರೀ ಮೂಕಾಂಬಿಕಾ' ಚಿತ್ರದ ಮೂಲಕ ಬಾಲನಟನಾಗಿ ಬಂದ ವಿಜಯ್​ ರಾಘವೇಂದ್ರ, ನಂತರದ ದಿನಗಳಲ್ಲಿ 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', 'ಗಾನಯೋಗಿ ಪಂಚಾಕ್ಷರಿ ಗವಾಯಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು.

2002ರಲ್ಲಿ ಬಿಡುಗಡೆಯಾದ 'ನಿನಗಾಗಿ' ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟ ಅವರು, ಈ 18 ವರ್ಷಗಳಲ್ಲಿ ಹಲವು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಇದೀಗ ತಮ್ಮ 50ನೇ ಚಿತ್ರದ ಹೊಸ್ತಿಲಲ್ಲಿರುವ ಅವರು, ಆ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇಷ್ಟಕ್ಕೂ ಆ ಚಿತ್ರ ಯಾವುದು ಎಂಬ ಪ್ರಶ್ನೆಗೆ, ಈಗಾಗಲೇ ದಿನಗಣನೆ ಶುರುವಾಗಲಿದ್ದು, ಉತ್ತರಕ್ಕಾಗಿ ಸೋಮವಾರದವರೆಗೂ ಕಾಯಬೇಕು.