ಬೆಂಗಳೂರು: ಇದುವರೆಗೆ 13 ಇಂಗ್ಲೀಷ್ ಸಿನಿಮಾಗಳನ್ನು ನಿರ್ದೇಶಿಸಿರುವ ಹಾಲಿವುಡ್ ನಿರ್ದೇಶಕ ರ್ಯಾಂಡಿ ಕೆಂಟ್ ಆ್ಯಕ್ಷನ್ ಕಟ್ ಹೇಳಿರುವ ಮೊದಲ ಸಿನಿಮಾ ‘ರೋಡ್ ಕಿಂಗ್’.
ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗಲೇ ವೀಸಾ ಸಿಗದ ಕಾರಣ ರ‌್ಯಾಂಡಿ ಕೆಂಟ್ ಭಾರತಕ್ಕೆ ಬರಲಾಗಲಿಲ್ಲ. ಹೀಗಾಗಿ ಸ್ಕೈಪ್ ಮೂಲಕವೇ ಈ ಸಿನಿಮಾ ನಿರ್ದೇಶಿಸಿರುವುದು ವಿಶೇಷ. ನಾಯಕ ಮತೀನ್ ಹುಸೇನ್ ಗೆಳೆಯರಾದ ಕೆಂಟ್, ಆ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಶೂಟಿಂಗ್ ಸಮಯದಲ್ಲಿ ವೀಸಾ ಸಮಸ್ಯೆ ಎದುರಾಗಿ ಭಾರತಕ್ಕೆ ಬರಲಾಗದಿದ್ದರೂ, ಇದೀಗ ಸಿನಿಮಾ ರಿಲೀಸ್ ಹತ್ತಿರವಾದಂತೆ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
‘ನಾನು ಹಾಲಿವುಡ್‌ನಲ್ಲಿ 13 ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಸ್ಕೈಪ್ ಮೂಲಕ ಕನ್ನಡ ಚಿತ್ರ ನಿರ್ದೇಶೀಸಿದ್ದು ಖುಷಿ ನೀಡಿದೆ’ ಎಂದು ತಮ್ಮ ಅನುಭವ ಹಂಚಿಕೊಂಡರು. ಇದೇ ಶುಕ್ರವಾರ (ಜೂ. 23) ‘ರೋಡ್ ಕಿಂಗ್’ ತೆರೆಗೆ ಬರಲಿದೆ. ಚಿತ್ರಕ್ಕೆ ನಾಯಕ ಮತೀನ್ ಅವರೇ ಕಥೆ ಬರೆದಿದ್ದು, ಅವರಿಗೆ ‘ರನ್ ಆ್ಯಂಟನಿ ರನ್’ ನಟಿ ರುಖ್ಸರ್ ಜೋಡಿಯಾಗಿದ್ದಾರೆ. ಜತೆಗೆ ವೃತ್ತಿಯಲ್ಲಿ ವೈದ್ಯರಾದ ಡಾ. ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.