ಮುಂಬೈ ಫಿಲ್ಮ್ ಸಿಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ದೃಶ್ಯ 
ಸಿನಿವಾಣಿ

ಫಿಲ್ಮ್​​ ಸಿಟಿಯಲ್ಲಿ ಬೆಂಕಿ ಅವಘಡ: ರಣಬೀರ್​-ಯಶ್​ ನಟನೆಯ 'ರಾಮಾಯಣ' ಸೆಟ್​ ಸುಟ್ಟು ಭಸ್ಮ? ವೈರಲ್​ ವಿಡಿಯೋ ಹಿಂದಿರುವ ಅಸಲಿ ಸತ್ಯವೇನು? Film City Under Fire

ಮುಂಬೈ ಫಿಲ್ಮ್ ಸಿಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸೆಟ್ ಸುಟ್ಟು ಭಸ್ಮವಾಗಿದೆ ಎಂಬ ವದಂತಿಯ ಅಸಲಿ ಸತ್ಯವೇನು? ಯಾವ ಸೆಟ್‌ಗೆ ಬೆಂಕಿ ಬಿದ್ದಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ: ಸೋಮವಾರ (ಅ.5) ಮುಂಬೈನ ಪ್ರಸಿದ್ಧ ಫಿಲ್ಮ್ ಸಿಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಾಲಿವುಡ್‌ನ ಬಹುನಿರೀಕ್ಷಿತ ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸುತ್ತಿರುವ ರಾಮಾಯಣ ಚಿತ್ರದ ಸೆಟ್‌ಗೆಯೆ ಬೆಂಕಿ ಬಿದ್ದಿದೆ ಎಂಬ ವದಂತಿ ದೊಡ್ಡಮಟ್ಟದಲ್ಲಿ ಹರಡಿದ್ದವು.

'ರಾಮಾಯಣ' ಸೆಟ್‌ಗೆ ಬೆಂಕಿ ಬಿದ್ದಿಲ್ಲ!

ವರದಿ ಪ್ರಕಾರ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸ್ಟುಡಿಯೋದ ಹೊರಭಾಗದಲ್ಲಿದ್ದ ಸಣ್ಣದೊಂದು ಟೆಂಟ್‌ನಲ್ಲಿ ಮಾತ್ರ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಆದರೆ ಇದನ್ನು ದೊಡ್ಡದಾಗಿ ಬಿಂಬಿಸಿ, ರಾಮಾಯಣ ಸೆಟ್‌ ಸಂಪೂರ್ಣ ಸುಟ್ಟುಹೋಗಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ.

ಈ ಅಗ್ನಿ ಅವಘಡದ ಕುರಿತು ಮಾತನಾಡಿದ 'ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್'ನ ಅಧ್ಯಕ್ಷ ಬಿ.ಎನ್. ತಿವಾರಿ, "ಕೆಲವು ದಿನಗಳ ಹಿಂದೆ ಹತ್ತಿರದ ಸ್ಥಳವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ನಾವು ಎಲ್ಲಾ ನಿರ್ಮಾಪಕರಿಗೆ ಎಚ್ಚರಿಕೆ ನೀಡಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದ್ದೆವು. ಆದರೂ ನಿರ್ಲಕ್ಷ್ಯದಿಂದಾಗಿ ಈಗ ಮತ್ತೊಮ್ಮೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ, ಆದರೆ ಚಿತ್ರತಂಡಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು" ಎಂದು ಎಚ್ಚರಿಸಿದ್ದಾರೆ.

ಬೆಂಕಿ ಬಿದ್ದಿದ್ದು ಯಾವ ಸೆಟ್‌ಗೆ?

ಮುಂಬೈನ ಈ ನಿರ್ಮಾಣ ಪ್ರದೇಶದಲ್ಲಿ ಅನೇಕ ಸ್ಟುಡಿಯೋಗಳು ಮತ್ತು ಶೂಟಿಂಗ್ ಸೆಟ್‌ಗಳಿವೆ. ವರದಿಗಳ ಪ್ರಕಾರ, ಕಲರ್ಸ್ ಟಿವಿಯ ರಿಯಾಲಿಟಿ ಶೋ 'ಪತಿ ಪತ್ನಿ ಔರ್ ಪಂಗಾ' ಸೆಟ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ನಂತರ ಅದು MTVಯ ಜನಪ್ರಿಯ ರಿಯಾಲಿಟಿ ಶೋ 'ಹಸಲ್' (Hustle) ಕಾರ್ಯಕ್ರಮದ ಸೆಟ್‌ಗೂ ವ್ಯಾಪಿಸಿದೆ ಎನ್ನಲಾಗಿದೆ.

ಅದೃಷ್ಟವಶಾತ್ 'ಪತಿ ಪತ್ನಿ ಔರ್ ಪಂಗಾ' ಶೂಟಿಂಗ್ ಆ ಸಮಯದಲ್ಲಿ ನಡೆಯುತ್ತಿರಲಿಲ್ಲ. ಆದರೆ MTV 'ಹಸಲ್' ಸೆಟ್‌ಗೆ ಬೆಂಕಿಯಿಂದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಕಾರ್ಯಕ್ರಮಗಳ ನಿರ್ಮಾಪಕರಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

ಎಚ್ಚೆತ್ತುಕೊಂಡ ಆಡಳಿತ ಮಂಡಳಿ

ಬೆಂಕಿ ಕಾಣಿಸಿಕೊಂಡ ಕೂಡಲೇ ಮುನ್ನೆಚ್ಚರಿಕಾ ಕ್ರಮವಾಗಿ ಬಿಎಂಸಿ (BMC) ಅಗ್ನಿಶಾಮಕ ದಳ, ಮುಂಬೈ ಪೊಲೀಸ್, ಬಿಎಂಸಿ ವಾರ್ಡ್ ನಿಯಂತ್ರಣ ವಿಭಾಗ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡು, ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಿದ್ದಾರೆ, (ಏಜೆನ್ಸೀಸ್​).