"ನೀವು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಿರಿ"! ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್​ ಗಾಂಧಿ 'ಏಕಪಕ್ಷೀಯ' ಆರೋಪ; ಕಾಂಗ್ರೆಸ್​ ನಾಯಕನಿಗೆ ECI ತಿರುಗೇಟು! Election Commission

ಬಿಹಾರ ಮತದಾರರ ಪಟ್ಟಿಯ SIR ಪ್ರಕ್ರಿಯೆ ಮತ್ತು ಫಾರ್ಮ್ 6 ಬದಲಾವಣೆ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಸುಪ್ರೀಂ ಕೋರ್ಟ್ ವಿಚಾರಣೆ ಹಾಗೂ ಸಂಪೂರ್ಣ ಸುದ್ದಿಯ ವಿವರ ಇಲ್ಲಿದೆ.
Tussle between the Election Commission and Rahul Gandhi over the Form 6 and SIR process controversy.
ಫಾರ್ಮ್ 6 ಮತ್ತು SIR ಪ್ರಕ್ರಿಯೆ ವಿವಾದದ ಕುರಿತು ಚುನಾವಣಾ ಆಯೋಗ ಮತ್ತು ರಾಹುಲ್ ಗಾಂಧಿ ನಡುವಿನ ಜಟಾಪಟಿ
Published on: 

ನವದೆಹಲಿ: ಕೇಂದ್ರ ಚುನಾವಣಾ ಆಯೋಗ (ECI) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು 'ಫಾರ್ಮ್ 6' ಬದಲಾವಣೆ ವಿಚಾರ ಈಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಫಾರ್ಮ್ 6 ಅನ್ನು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಗಂಭೀರ ಆರೋಪಗಳನ್ನು ಚುನಾವಣಾ ಆಯೋಗವು ಖಂಡಿಸಿದ್ದು, ಇವು "ತಪ್ಪು ದಾರಿಗೆಳೆಯುವಂಥವು"(Misleading) ಎಂದು ತಿರುಗೇಟು ನೀಡಿದೆ.

ವಿವಾದಕ್ಕೆ ಕಾರಣವೇನು?

ಹೊಸದಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಬಯಸುವ ನಾಗರಿಕರು 'ಫಾರ್ಮ್ 6' ಅನ್ನು ಬಳಸುತ್ತಾರೆ. ಆದರೆ ಈ ಬಾರಿ SIR ಪ್ರಕ್ರಿಯೆಯ ಸಂದರ್ಭದಲ್ಲಿ, ಆನ್‌ಲೈನ್ ನಮೂನೆಗೆ ಹೊಸ ಘೋಷಣೆಯೊಂದನ್ನು ಸೇರಿಸಲಾಗಿದೆ. ಇದರ ಪ್ರಕಾರ, ಅರ್ಜಿದಾರರು ತಾವು ಅಥವಾ ತಮ್ಮ ಪೋಷಕರು ಹಿಂದಿನ SIR ಪ್ರಕ್ರಿಯೆಯಲ್ಲಿ ದಾಖಲಾಗಿದ್ದರೇ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕಿದೆ.

ಇತರ ರಾಜ್ಯಗಳಲ್ಲಿ ಈ ಹಿಂದೆ ಬಳಸಿದ್ದ ಫಾರ್ಮ್ 6 ರಲ್ಲಿ ಈ ಕಟ್ಟುನಿಟ್ಟಿನ ನಿಯಮ ಇರಲಿಲ್ಲ. ಈ ಬದಲಾವಣೆಯನ್ನು ಮುಖ್ಯ ಚುನಾವಣಾ ಆಯುಕ್ತರು ಯಾವುದೇ ಅಧಿಕೃತ ಮತ್ತು ಸೂಕ್ತ ಅನುಮೋದನೆಯಿಲ್ಲದೆ ಏಕಪಕ್ಷೀಯವಾಗಿ ಜಾರಿಗೆ ತಂದಿದ್ದಾರೆ ಎನ್ನುವುದು ರಾಹುಲ್ ಗಾಂಧಿ ಅವರ ಮುಖ್ಯ ಆರೋಪವಾಗಿದೆ.

ಚುನಾವಣಾ ಆಯೋಗದ ಸ್ಪಷ್ಟನೆ ಏನು?

ಸೋಮವಾರ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಬಿಹಾರದಲ್ಲಿ ಜೂನ್ 24, 2025 ರಂದೇ SIR ಪ್ರಕ್ರಿಯೆ ಆರಂಭಿಸುವ ಆದೇಶವನ್ನು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಮೇ 27, 2026 ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ಆಯೋಗ, ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವೂ ಎತ್ತಿಹಿಡಿದಿದೆ ಎಂದು ಹೇಳಿದೆ. ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯ ಅಂಶ 1(iii) ರಲ್ಲೂ ಈ ಬಗ್ಗೆ ಸ್ಪಷ್ಟಪಡಿಸಲಾಗಿತ್ತು ಎಂದು ಚುನಾವಣಾ ಆಯೋಗ ನೆನಪಿಸಿದೆ.

ಆದರೆ, ರಾಹುಲ್ ಗಾಂಧಿ ಎತ್ತಿರುವ ಪ್ರಮುಖ ಪ್ರಶ್ನೆಯಾದ "ಫಾರ್ಮ್ 6ರ ಆವೃತ್ತಿಯನ್ನು ಅನುಮೋದನೆಯಿಲ್ಲದೆ ಬದಲಾಯಿಸಲಾಗಿದೆ" ಎಂಬ ಆರೋಪಕ್ಕೆ ಆಯೋಗದ ಈ ಹೇಳಿಕೆಯಲ್ಲಿ ನೇರ ಉತ್ತರ ಸಿಕ್ಕಿಲ್ಲ.

Also Read
174 ಜೀವ ಉಳಿಸಿದ ಧೀರ ಪೈಲಟ್‌: ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ‘ಭಾರತ ರತ್ನ’ ನೀಡಲು ಬಿ. ಎಸ್​. ಯಡಿಯೂರಪ್ಪ ಆಗ್ರಹ! B S Yediyurappa
Tussle between the Election Commission and Rahul Gandhi over the Form 6 and SIR process controversy.

ಸುಪ್ರೀಂ ಕೋರ್ಟ್ ಅಂಗಳದಲ್ಲಿ ಪ್ರಕರಣ

ಈ ಗೊಂದಲದ ನಡುವೆಯೇ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ಮಹತ್ವದ ವಿಚಾರಣೆ ನಡೆಯಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ನಡೆಸಿತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಕೂಡ ಇದ್ದರು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, "ಯಾವುದೇ ಮಾರ್ಪಡಿಸಿದ 'ಫಾರ್ಮ್ 6'ಗೆ ನಾವು ಅನುಮೋದನೆ ನೀಡಿಲ್ಲ. ಈ ವಿಷಯದಲ್ಲಿ ಸ್ಪಷ್ಟತೆ ಇರಲಿ. ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿದ ಬಳಿಕ, ಈ ಬದಲಾವಣೆಯನ್ನು ಯಾರು ಮಾಡಿದ್ದಾರೆ ಎಂಬುದನ್ನು ನಾವು ಖಂಡಿತಾ ಪರಿಶೀಲಿಸುತ್ತೇವೆ ಎಂದಿದ್ದಾರೆ.

ಮತದಾರರ ಹಕ್ಕಿನ ರಕ್ಷಣೆ ಮತ್ತು ಪಾರದರ್ಶಕತೆಯ ವಿಚಾರದಲ್ಲಿ ಈಗ ಸುಪ್ರೀಂ ಕೋರ್ಟ್ ಮುಂದೆ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿಗೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net