ಸಿನಿವಾಣಿ

ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ಕಾರಣದ ಕುರಿತು ತನಿಖೆ

ಮುಂಬೈ: ಬಾಲಿವುಡ್​ನಲ್ಲಿ ಉದಯೋನ್ಮುಖ ನಟ ಎನಿಸಿಕೊಂಡಿದ್ದ ಸುಶಾಂತ್​ ಸಿಂಗ್​ ರಾಜಪೂತ್​ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಕಾರಣವಾ ಅಥವಾ ವೈಯಕ್ತಿಕ ಕಾರಣ ಏನಾದರೂ ಇತ್ತಾ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ ಸುಶಾಂತ್​ ಸಿಂಗ್​ ರಾಜಪೂತ್​ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಳೆದ ಐದಾರು ತಿಂಗಳಿನಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಸುಶಾಂತ್​ ಅವರ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಕಾರಣ ಏನಿರಬಹುದು ಎಂಬುದನ್ನು ತಿಳಿಯಲು ಖಿನ್ನತೆಗಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವರು ಏನಾದರೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆ? ಇಲ್ಲವೇ ವೃತ್ತಿರಂಗದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದವೇ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಹತ್ತಿರಾಗಿದ್ದವರನ್ನು ಪ್ರಶ್ನಿಸಿದಾಗ ಈ ಎಲ್ಲ ಅನುಮಾನಗಳು ಪರಿಹಾರವಾಗುವ ನಿರೀಕ್ಷೆ ಇದೆ. ಅವರ ಸಹೋದರಿಯರು, ಕುಟುಂಬದ ಸದಸ್ಯರು ಹಾಗೂ ಆಪ್ತಸ್ನೇಹಿತರನ್ನು ಪ್ರಶ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮಾಜಿ ಮ್ಯಾನೇಜರ್​ ಸಾವಿಗೆ ಸಂಬಂಧವಿಲ್ಲ: ಸುಶಾಂತ್​ ಸಿಂಗ್​ ರಾಜಪೂತ್​ ಬಳಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಕೆಲದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಆ ಘಟನೆಗೂ ಸುಶಾಂತ್​ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಮುಂಬೈ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಆ ಘಟನೆಯನ್ನು ಸುಶಾಂತ್​ ಆತ್ಮಹತ್ಯೆಗೆ ತಳಕು ಹಾಕಲು ಯಾವುದೇ ಸುಳಿವು, ಸಾಕ್ಷ್ಯಾಧಾರಗಳು ಇದುವರೆಗೂ ಲಭ್ಯವಾಗಿಲ್ಲ. ಆ ಆತ್ಮಹತ್ಯೆ ಪ್ರಕರಣದಲ್ಲಿ ಸುಶಾಂತ್​ ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಸದ್ಯ ಅವರ ಮೊಬೈಲ್​ಫೋನ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಕಾಲ್​ ರೆಕಾರ್ಡ್ ಅನ್ನು ಪರಿಶೀಲಿಸಲಾಗುತ್ತಿದ್ದು, ಕೊನೆಯ ದಿನಗಳಲ್ಲಿನ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಅರಿತುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸುಶಾಂತ್​ ಅವರ ಬಾಂದ್ರಾದ ಕಾರ್ಟರ್​ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನ 7ನೇ ಮಹಡಿಯಲ್ಲಿ ಮನೆಯಲ್ಲಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಇಬ್ಬರು ಬಾಣಸಿಗರು, ಮನೆಗೆಲಸದವರು ಮತ್ತು ಅವರ ಸ್ನೇಹಿತ ಎನ್ನಲಾದ ಕಲಾವಿನ್ಯಾಸಕರೊಬ್ಬರು ಮನೆಯಲ್ಲಿದ್ದರು. ಇವರೆಲ್ಲರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಳುಹಿಸಿದ್ದೇವೆ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಮರಣಪತ್ರ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ಬಂದ ಬಳಿಕವಷ್ಟೇ ಏನಾದರೂ ಸುಳಿಸುವ ಸಿಗುವ ಸಾಧ್ಯತೆ ಇದೆ. ಸದ್ಯಕ್ಕೆ ಅವರ ಕುಟುಂಬ ವರ್ಗದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.