ಸಿನಿವಾಣಿ

ಸುಶಾಂತ್​ ಒಪ್ಪಿದ್ದ ಚಿತ್ರಗಳಿಗಿಂತ ಒಪ್ಪದಿದ್ದ ಚಿತ್ರಗಳೇ ಹೆಚ್ಚು!

ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ 20 ದಿನಗಳಾಗಿವೆ. ಈ 20 ದಿನಗಳಲ್ಲಿ ಅವರ ಬಗ್ಗೆ ಸಾಕಷ್ಟು ಮಾತನಾಡಲಾಗಿದೆ, ಸಾಕಷ್ಟು ಬರೆಯಲಾಗಿದೆ. ಆದರೆ, ಮೊಗೆದಷ್ಟೂ ಸುದ್ದಿಗಳು ಸಿಗುತ್ತಲೇ ಇವೆ ಎನ್ನುವುದು ವಿಶೇಷ.

ಸುಶಾಂತ್​ ಅವರ ಚಿತ್ರಜೀವನ ದೊಡ್ಡದೇನಲ್ಲ. 2013ರಲ್ಲಿ ಬಿಡುಗಡೆಯಾದ 'ಕಾಯ್​ ಪೋ ಚೇ' ಚಿತ್ರದ ಮೂಲಕ ಅವರ ಚಿತ್ರಜೀವನ ಪ್ರಾರಂಭವಾಯಿತು. ಇನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿರುವ 'ದಿಲ್​ ಬೇಚಾರಾ' ಅವರ ಕೊನೆಯ ಚಿತ್ರವಾಗಲಿದೆ. ಈ ಮಧ್ಯೆ, ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಹತ್ತಾಗುತ್ತದೆ. ಎಲ್ಲಾ ಸೇರಿದರೆ, ಈ ಏಳು ವರ್ಷಗಳಲ್ಲಿ ಸುಶಾಂತ್​ ಅಭಿನಯಿಸಿರುವ ಚಿತ್ರಗಳ ಸಂಖ್ಯೆ 12 ಮಾತ್ರ.

ಸುಶಾಂತ್​ ಅಭಿನಯಿಸಿರುವ ಚಿತ್ರಗಳಿಗಿಂತ, ಅವರು ಅಭಿನಯಿಸದರಿರುವ ಚಿತ್ರಗಳ ಸಂಖ್ಯೆಯೇ ಹೆಚ್ಚಿದೆ ಎಂದು ಬಾಲಿವುಡ್​ ಪಂಡಿತರು ಹೇಳುತ್ತಾರೆ. ಸುಶಾಂತ್​ ಬಿಟ್ಟಿರುವ ಚಿತ್ರಗಳ ಸಂಖ್ಯೆ 12 ದಾಟುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಬಿಟ್ಟಿರುವ ಕೆಲವು ಚಿತ್ರಗಳಲ್ಲಿ ಬೇರೆಯವರು ನಟಿಸಿ, ಯಶಸ್ವಿಯೂ ಆಗಿದ್ದಾರೆ ಮತ್ತು ಒಳ್ಳೆಯ ಹೆಸರನ್ನೂ ಮಾಡಿದ್ದಾರೆ ಎನ್ನುವುದು ವಿಶೇಷ.

ಪ್ರಮುಖವಾಗಿ, ಸಂಜಯ್​ ಲೀಲಾ ಬನ್ಸಾಲಿಯವರ ಮೂರು ಚಿತ್ರಗಳನ್ನು ಬಿಟ್ಟಿದ್ದರು ಸುಶಾಂತ್​. 'ರಾಮ್​-ಲೀಲಾ', 'ಬಾಜಿರಾವ್​ ಮಸ್ತಾನಿ' ಮತ್ತು 'ಪದ್ಮಾವತ್​' ಚಿತ್ರಗಳಿಗೆ ಬನ್ಸಾಲಿ ಅವರ ಮೊದಲ ಆಯ್ಕೆ ಸುಶಾಂತ್​ ಸಿಂಗ್​ ರಜಪೂತ್​ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಮೂರೂ ಚಿತ್ರಗಳಲ್ಲಿ ಸುಶಾಂತ್​ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಸುಶಾಂತ್​ ಬಿಟ್ಟ ಮೂರೂ ಚಿತ್ರಗಳಲ್ಲಿ ಕೊನೆಗೆ ರಣವೀರ್​ ಸಿಂಗ್​ ನಟಿಸಿ ಗೆದ್ದರು. ಹಾಗಾಗಿ, ರಣವೀರ್​ ಸಿಂಗ್​ ಯಾವತ್ತೂ ಸುಶಾಂತ್​ಗೆ ಚಿರಋಣಿಯಾಗಿರಬೇಕು ಎಂದು ಬಾಲಿವುಡ್​ ಪಂಡಿತರು ಅಭಿಪ್ರಾಯಪಡುತ್ತಾರೆ.

ಈ ಮೂರು ಚಿತ್ರಗಳಲ್ಲದೆ, ಸುಶಾಂತ್​ ಬಿಟ್ಟಿರುವ ಇನ್ನೂ ಹಲವು ಚಿತ್ರಗಳಿವೆ. 'ಫಿತೂರ್​', 'ಹಾಫ್​ ಗರ್ಲ್​​ಫ್ರೆಂಡ್​', 'ರೋಮಿಯೋ ಅಕ್ಬರ್​ ವಾಲ್ಟರ್​' ಮುಂತಾದ ಚಿತ್ರಗಳಲ್ಲಿ ಸುಶಾಂತ್​ ನಟಿಸಬೇಕಿತ್ತಂತೆ. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳನ್ನು ಅವರು ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ.

ಅದರಲ್ಲೂ 'ರೋಮಿಯೋ ಅಕ್ಬರ್​ ವಾಲ್ಟರ್​' ಚಿತ್ರದ ಮೊದಲ ಪೋಸ್ಟರ್​ನಲ್ಲಿ ಸುಶಾಂತ್​ ಹೆಸರಿತ್ತು. ಆ ಚಿತ್ರ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ, ಸುಶಾಂತ್​ ಚಿತ್ರದಿಂದ ಹೊರಬಿದ್ದರು. ಡೇಟ್ಸ್​ ಸಮಸ್ಯೆಯ ನೆಪವೊಡ್ಡಿ, ತಮಗೆ ಸಿಕ್ಕ ಪಾತ್ರವನ್ನು ಜಾನ್​ ಅಬ್ರಹಾಂಗೆ ಬಿಟ್ಟುಕೊಟ್ಟರು. ಅವರು ಯಾಕೆ ಚಿತ್ರ ಕೈಬಿಟ್ಟರು ಎಂದು ನಿರ್ಮಾಪಕ ಬಂಟಿ ವಾಲಿಯಾ ಮತ್ತು ನಿರ್ದೇಶಕ ರಾಬ್ಬಿ ಗ್ರೆವಾಲ್​ಗೆ ಕೊನೆಗೂ ಗೊತ್ತಾಗಲಿಲ್ಲವಂತೆ. ಡೇಟ್ಸ್​ ಸಮಸ್ಯೆ ಇದ್ದಿದ್ದರೆ ಕೂತು ಬಗೆಹರಿಸಿಕೊಳ್ಳಬಹುದಿತ್ತು, ಅದು ಬಿಟ್ಟು ಹೀಗೆ ಸುಶಾಂತ್​ ಹೀಗೆ ಮಾಡಬಾರದಿತ್ತು ಇಬ್ಬರೂ ಹೇಳಿಕೊಂಡಿದ್ದರು.

ಕಾರಣ ಏನೇ ಇರಲಿ, ಸುಶಾಂತ್​ ಹಲವು ಚಿತ್ರಗಳನ್ನು ಮಾತ್ರ ಕಳೆದುಕೊಂಡಿದ್ದರು. ಬಹುಶಃ ಅವರು ಸ್ವಲ್ಪ ತಾಳ್ಮೆವಹಿಸಿದ್ದರೆ, ಇನ್ನಷ್ಟು ಯಶಸ್ಸು ನೋಡಬಹುದಿತ್ತೇನೋ?