ಬೆಂಗಳೂರು: ಕನ್ನಡ ಚಿತ್ರರಂಗವು ಬರೀ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಬೇರೆಬೇರೆ ಊರುಗಳಲ್ಲೂ ಸಿನಿಮಾ ಮಾಡುವ ಉತ್ಸಾಹಿಗಳಿದ್ದು, ಅವರು ತಮ್ಮ ಪ್ರದೇಶದ ಕುರಿತಾದ ಚಿತ್ರಗಳನ್ನು ಸದ್ದಿಲ್ಲದೆ ಮಾಡುತ್ತಿರುತ್ತಾರೆ. ಆದರೆ, ಆ ಚಿತ್ರಗಳು ಕರ್ನಾಟಕದ ಇತರೆ ಭಾಗಗಳಿಗೆ ಎಷ್ಟೋ ಬಾರಿ ತಲುಪುವುದಿಲ್ಲ. ತಮ್ಮೂರಿನ ಕಥೆ ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ದೃಷ್ಟಿಯಿಂದ ಅನೀಶ್ ಶರ್ಮಾ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸ್ವಂತ ಊರಾದ ಸಾಗರದಲ್ಲಿ ಒಂದಿಷ್ಟು ಸ್ನೇಹಿತರ ಜತೆಗೆ ಸೇರಿಕೊಂಡು ಊರ್ಮನೆ ಪ್ರೊಡಕ್ಷನ್ಸ್ ಎಂಬ ತಂಡ ಕಟ್ಟುವುದರ ಜತೆಗೆ ‘ಶಬರಿ’ ಎಂಬ ಕಿರುಚಿತ್ರ ಮಾಡಿದ್ದಾರೆ. ಆ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.
ನಂತರ, ಸಮಾನ ಮನಸ್ಕರು ಮತ್ತು ಬೇರೆಬೇರೆ ಊರುಗಳಲ್ಲಿ ಕಿರುಚಿತ್ರಗಳನ್ನು ಮಾಡಿರುವ ಆರು ನಿರ್ದೇಶಕರನ್ನು ಸೇರಿಸಿಕೊಂಡು, ತಮ್ಮ ಕಿರುಚಿತ್ರಗಳನ್ನು ‘ಊರ್ಮನೆ ಹಬ್ಬ’ ಎಂಬ ಕಾರ್ಯಕ್ರಮದಡಿ ಪ್ರದರ್ಶಿಸಲು ಮುಂದಾಗಿದ್ದಾರೆ. ಈ ಮೂಲಕ ತಮ್ಮೂರಿನ ಕಥೆಯನ್ನು ನಿಮ್ಮೂರಿನಲ್ಲಿ ತೋರಿಸುವುದಕ್ಕೆ ಮುಂದಾಗಿದ್ದಾರೆ. ಮೊದಲ ‘ಊರ್ಮನೆ ಹಬ್ಬ’ವು ನಾಳೆ (ಡಿ. 19) ಸಂಜೆ ನಾಲ್ಕು ಗಂಟೆಗೆ ಕಲಾವಿದರ ಸಂಘದ ಡಾ. ಅಂಬರೀಷ್ ಸಭಾಭವನದಲ್ಲಿ ನಡೆಯಲಿದ್ದು, ಅಂದು ಅನೀಶ್ ಶರ್ಮಾ ಮತ್ತು ಅವರ ಗೆಳೆಯರಾದ ದೀಪಕ್ ರಾಮ್ ಶ್ರೀಕರ ಭಟ್, ನಿಖಿಲ್ ವಿನಯ್, ನವೀನ್ ತೇಜಸ್ವಿ, ಅಶ್ವತ್ಥ್ ಹಾಗೂ ಶರತ್ ರೈಸದ್ ನಿರ್ದೇಶಿಸಿರುವ ‘ಶಬರಿ’, ‘ಅಪ್ಪನ್ ಡೈರೆಕ್ಷನ್’, ‘ಹೇರ್ಸ್ಟೈಲ್ ಬೈ ಕೃಷ್ಣಣ್ಣ’, ‘ಡಾನಟ್’, ‘ದಿ ಲಾಸ್ಟ್ ಟೈಮ್ ಐ ಸಾ ದಿ ಮೂನ್ ಚಂದ್ರ’, ‘ಹಬ್ಬ ಹರಿದಿನ ಸುಗ್ಗಿ ಸಿವರಾತ್ರಿ’, ‘ಕಲ್ಲರ್ ಕನ್ನಡ್ಕ’ ಹಾಗೂ ‘ಕಾಯಿರಸ’ ಕಿರುಚಿತ್ರಗಳು ಪ್ರದರ್ಶನವಾಗಲಿವೆ.